ಬಿಡುಗಡೆಯಾದ ನಾಲ್ಕೂ ಭಾಷೆಗಳಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಾಂತಾರ (Kantara) ಸಿನಿಮಾವನ್ನು ಇಂದು ಸಂಜೆ 7 ಗಂಟೆಗೆ ಡಾ. ವೀರೇಂದ್ರ ಹೆಗ್ಗಡೆಯವರು ನೋಡಲಿದ್ದಾರೆ. ಕುಟುಂಬ ಸಮೇತರಾಗಿ ಮಂಗಳೂರಿನ (Mangalore) ಭಾರತ್ ಮಾಲ್ ನಲ್ಲಿರುವ ಬಿಗ್ ಸಿನಿಮಾಸ್ ನಲ್ಲಿ ಅವರು ಚಿತ್ರವನ್ನು ವೀಕ್ಷಿಸುತ್ತಿದ್ದು, ಸಿನಿಮಾ ತಂಡ ಕೂಡ ಈ ಸಂದರ್ಭದಲ್ಲಿ ಹಾಜರಿರಲಿದೆ. ಕಾಂತಾರ ಸಿನಿಮಾ ಆಗುವಲ್ಲಿ ವೀರೇಂದ್ರ ಹೆಗ್ಗಡೆ (Virendra Heggade) ಅವರು ಕೂಡ ಪ್ರಮುಖ ಪಾತ್ರವಹಿಸಿದ್ದರಿಂದ ಅವರ ಪ್ರತಿಕ್ರಿಯೆ ಕೂಡ ಮಹತ್ವ ಪಡೆದುಕೊಳ್ಳಲಿದೆ.
ಈಗಾಗಲೇ ಭಾರತೀಯ ಸಿನಿಮಾ ರಂಗದ ಅನೇಕ ಗಣ್ಯರು ಸಿನಿಮಾವನ್ನು ನೋಡಿದ್ದು, ಮೆಚ್ಚಿ ಮಾತನಾಡಿದ್ದಾರೆ. ಬಿಡುಗಡೆಯಾದ ನಾಲ್ಕೂ ಭಾಷೆಯ ಕಲಾವಿದರು ಕೂಡ ಚಿತ್ರವನ್ನು ಕೊಂಡಾಡಿದ್ದಾರೆ. ನಿನ್ನೆಯಷ್ಟೇ ಕಾಂತಾರ ಸಿನಿಮಾವನ್ನು ವೀಕ್ಷಿಸಿರುವ ಕಂಗನಾ ರಣಾವತ್, ಈ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅಲ್ಲದೇ, ಆಸ್ಕರ್ ಪ್ರಶಸ್ತಿಗಾಗಿ ಭಾರತದಿಂದ ಈ ಚಿತ್ರವನ್ನು ನೇರವಾಗಿ ಆಯ್ಕೆ ಮಾಡಿ ಎಂದು ಸರಕಾರದ ಗಮನ ಸೆಳೆದಿದ್ದಾರೆ. ಇಂತಹ ಚಿತ್ರಗಳೇ ಭಾರತದಿಂದ ಆಸ್ಕರ್ ಗಾಗಿ ಕಳುಹಿಸಬೇಕು. ಈ ಚಿತ್ರಕ್ಕೆ ಗೆಲ್ಲುವಂತಹ ಎಲ್ಲ ಅರ್ಹತೆಗಳೂ ಇವೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಿಷಬ್ ಹೇಳಿದ ಹಿಂದೂ ಪದ ಒಪ್ಪಲ್ಲ, ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ: ಸಮರ್ಥಿಸಿದ ಚೇತನ್
ರಿಷಬ್ ಶೆಟ್ಟಿ (Rishabh Shetty) ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾವನ್ನು ನೋಡುವುದಾಗಿ ಈ ಹಿಂದೆ ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿದ್ದರು. ಈ ಸಿನಿಮಾವನ್ನು ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದರು. ಅದರಂತೆ ನಿನ್ನೆ ಸಿನಿಮಾ ನೋಡಿದ್ದಾರೆ. ಥಿಯೇಟರ್ ನಿಂದ ಆಚೆ ಬಂದು ಭಾವುಕರಾಗಿಯೇ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ಕುಟುಂಬ ಸಮೇತರಾಗಿ ನಾನು ಕಾಂತಾರ ಸಿನಿಮಾವನ್ನು ನೋಡಿದೆ. ಥಿಯೇಟರ್ ನಿಂದ ಆಚೆ ಬಂದ ಮೇಲೂ ಇನ್ನೂ ನಡುಗುತ್ತಲೇ ಇದ್ದೇನೆ. ಚಿತ್ರಕಥೆ, ಅದನ್ನು ತೋರಿಸಿದ ರೀತಿ, ರಿಷಬ್ ನಟನೆಯನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಅದ್ಭುತವಾದ ಸಿನಿಮಾವನ್ನು ನೋಡಿದ ತೃಪ್ತಿ ನನಗಿದೆ. ಈ ಅನುಭವದಿಂದ ಆಚೆ ಬರಲು ನನಗೆ ಒಂದು ವಾರವಾದರೂ ಬೇಕು. ಆ ರೀತಿಯಲ್ಲಿ ಸಿನಿಮಾ ಮೂಡಿ ಬಂದಿದೆ ಎಂದು ಹೇಳಿದ್ದಾರೆ.