ಸಿಂಗಾಪುರದಲ್ಲಿ ‘ವಿರಾಟಪುರ ವಿರಾಗಿ’ ಶೋ: ಮೂಕವಿಸ್ಮಿತರಾದ ಪ್ರೇಕ್ಷಕರು

Public TV
3 Min Read
Viratpura Viragi 4

ನ್ನಡ ಸಂಘ ಸಿಂಗಾಪುರ (Singapore) ಆಯೋಜಿಸಿದ್ದ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್. ಲಿಂಗದೇವರು (BS Lingadevaru) ನಿರ್ದೇಶನದ ‘ವಿರಾಟಪುರ ವಿರಾಗಿ’ (Viratpura Viragi) ಸಿನಿಮಾದ ಪ್ರದರ್ಶನ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಸಿನಿಮಾ ಪ್ರದರ್ಶನದ ನಂತರ ಪ್ರೇಕ್ಷಕರು ಭಾವುಕರಾಗಿದ್ದರು. ಹಾನಗಲ್ ಕುಮಾರಸ್ವಾಮಿಗಳ ಚರಿತೆಯನ್ನು ಕಣ್ತುಂಬಿಕೊಂಡು ಪುಳಕಿತರಾಗಿದ್ದರು.

Viratpura Viragi 5

ಸಿಂಗಾಪುರ ಕನ್ನಡ ಸಂಘವು ಈ ಬಾರಿ ವಚನಾಂಜಲಿಯನ್ನು ವಿಶೇಷವಾಗಿ ಆಯೋಜಿಸಿತ್ತು. ಇದರ ಭಾಗವಾಗಿ ಶಿವಯೋಗಿಗಳಾದ ಶ್ರೀ ಹಾನಗಲ್ ಕುಮಾರಸ್ವಾಮಿಯವರ ಜೀವನಾಧಾರಿತ ಚಲನಚಿತ್ರ ‘ವಿರಾಟಪುರ ವಿರಾಗಿ’ಯ ಪ್ರದರ್ಶನವನ್ನು ಏರ್ಪಡಿಸಿ, ಅಲ್ಲಿನ ಕನ್ನಡಿಗರಿಗೆ ಕುಮಾರಸ್ವಾಮಿಗಳ ಚರಿತೆಯನ್ನು ತಿಳಿಸಿದ್ದು ವಿಶೇಷವಾಗಿತ್ತು. ಈ ಪ್ರದರ್ಶನದಲ್ಲಿ ನಿರ್ದೇಶಕರಾದ ಲಿಂಗದೇವರು, ಕುಮಾರಸ್ವಾಮಿಗಳ ಪಾತ್ರ ಮಾಡಿದ್ದ ಸುಚೇಂದ್ರ ಪ್ರಸಾದ್ (Suchendra Prasad)  ಭಾಗಿಯಾಗಿದ್ದರು.

Viratpura Viragi 1

ಜನಸಾಮಾನ್ಯರ ಬದುಕನ್ನು ಉನ್ನತಗೊಳಿಸಲು ಹನ್ನೆರಡನೆಯ ಶತಮಾನದ ಶಿವಶರಣರು ಶ್ರಮಿಸಿರುವುದು ನಮಗೆಲ್ಲಾ ತಿಳಿದೇ ಇದೆ. ಶರಣರು ಸಾಹಿತ್ಯ ರಚಿಸಬೇಕೆಂಬ ಉದ್ದೇಶದಿಂದ ವಚನಗಳನ್ನು ಬರೆಯದೆ ದಿನನಿತ್ಯದ ತಮ್ಮ ಅನುಭವಗಳನ್ನು ವಚನದ ರೂಪದಲ್ಲಿ ಹೇಳಿದ್ದರಿಂದ ವಚನ ಸಾಹಿತ್ಯ ಒಂದು ಚಳಿವಳಿಯಾಯಿತು ಎಂಬುದು ಇತಿಹಾಸ. ವರ್ಣ-ಆಧಾರಿತ, ಜಾತಿ ಆಧಾರಿತ, ಲಿಂಗ-ಆಧಾರಿತ ಅಸಮಾನತೆಯನ್ನು ನಿರ್ಮೂಲಗೊಳಿಸಿ ಸರ್ವ ಸಮಾನತೆಯ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದವರು ಶಿವ ಶರಣರು. ಈ ಹಿನ್ನಲೆಯಲ್ಲಿ ಶ್ರೀ ಹಾನಗಲ್ ಕುಮಾರಸ್ವಾಮಿಯವರು ಎಲ್ಲರನ್ನು ಒಳಗೊಳ್ಳುವ ಮತ್ತು ಬಹುತ್ವ ಪರಂಪರೆಗೆ ಒತ್ತುಕೊಟ್ಟು ಸಮಸಮಾಜ ನಿರ್ಮಿಸಲು ಸ್ವಾತಂತ್ರ್ಯಪೂರ್ವದಲ್ಲಿ ಶ್ರಮಿಸಿದವರು. ಅಂತಹವರ  ಜೀವನಾಧಾರಿತ  ವಿರಾಟಪುರ ವಿರಾಗಿ ಸಿನಿಮಾವು ಶರಣರ ವಚನಗಳ ಅರ್ಥ ಮತ್ತು ಅಂತರಂಗದ ಅರಿವನ್ನು ಮೂಡಿಸುವಂಥದ್ದು.

Viratpura Viragi 3

ಸಿನಿಮಾದಲ್ಲಿ ವಚನಗಳನ್ನು ಸನ್ನಿವೇಶಗಳಿಗೆ ಹೊಂದುವಂತೆ ಆಯ್ಕೆ ಮಾಡಿಕೊಂಡು, ಅದಕ್ಕೆ ಅತ್ಯುತ್ತಮ ಸಂಗೀತ ಸಂಯೋಜನೆ ಮಾಡಿರುವುದು ಪ್ರೇಕ್ಷಕರ ಹೃದಯವನ್ನು ಗೆಲ್ಲುವಲ್ಲಿ ಸಹಾಯವಾಗಿದೆ. ಇಡೀ ತಂಡವು ನಮ್ಮನ್ನು ಸ್ವಾತಂತ್ರ್ಯ ಪೂರ್ವ ಕಾಲಘಟ್ಟಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. ಜನಸಾಮಾನ್ಯರನ್ನು ಆಧ್ಯಾತ್ಮದತ್ತ ಕರೆದುಕೊಳ್ಳಲು, ನೈತಿಕ ಮೌಲ್ಯಗಳನ್ನು ಹೆಚ್ಚಿಸಲು, ಅನುಭಾವದ ಚಿಂತನೆಗೆ ತೊಡಗಿಸಲು ಈ ಚಿತ್ರ ಕನ್ನಡಿಗರ ಹೆಮ್ಮೆಯ ಚಿತ್ರವಾಗಿದೆ ಎನ್ನುವ ಅಭಿಪ್ರಾಯ ಪ್ರದರ್ಶನದ ನಂತರ ವ್ಯಕ್ತವಾಯಿತು.

Viratpura Viragi 2

ಸುಮಾರು ನಾಲ್ಕಾರು ದಶಕಗಳಿಂದ ಕನ್ನಡಿಗರು ಸಿಂಗಾಪೂರದಲ್ಲಿ ನೆಲೆಸಿದ್ದಾರೆ. ಕನ್ನಡಿಗರು ಸಂಘ ಜೀವಿಗಳು ಮತ್ತು ತಮ್ಮ ಸಂಸ್ಕೃತಿ,  ಪರಂಪರೆ ಮತ್ತು ಕನ್ನಡ ಭಾಷೆ ನಮ್ಮ ಅಸ್ಮಿತೆಯೆಂದು ನಂಬಿರುವವರು. ಈ ಹಿನ್ನೆಲೆಯಲ್ಲಿ 11ನೇ ಸೆಪ್ಟೆಂಬರ್ 1996 ರಂದು ಸಿಂಗಾಪೂರದ ರಿಜಿಸ್ಟ್ರಾರ್ ಆಫ್ ಸೊಸೈಟಿಯಲ್ಲಿ ನೋಂದಾಯಿಸುವ ಮೂಲಕ ಕನ್ನಡ ಸಂಘ ಉದಯವಾಯಿತು. ಅಂದಿನಿಂದ ಇಂದಿನವರೆಗೂ ಕನ್ನಡಿಗರ ಸಂಸ್ಕೃತಿ,  ಪರಂಪರೆ ಮತ್ತು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಅನೇಕ ಕಾರ್ಯಕ್ರಮ ಗಳನ್ನು ಆಯೋಜಿಸುವ ಮೂಲಕ ಶ್ರಮಿಸುತ್ತಿದ್ದಾರೆ.

Viratpura Viragi12

ಕನ್ನಡ ಸಂಘ (ಸಿಂಗಾಪುರ)ವು ವಚನ ಸಾಹಿತ್ಯದ ಸಾರಾಮೃತವನ್ನು ಹರಡುವ, ಹಂಚುವ ಸದುದ್ದೇಶದಿಂದ ಸುಮಾರು 13 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮವೇ ವಚನಾಂಜಲಿ.  ಪ್ರತೀ ವರ್ಷ ವಿವಿಧ ರೂಪಗಳಲ್ಲಿ ಆಚರಿಸಿಕೊಂಡು ಬಂದಂತಹ ವಚನಾಂಜಲಿ, ಶಾಸ್ತ್ರೀಯ ಸಂಗೀತ, ಜನಪದ ಶೈಲಿಯ ಹಾಡುಗಳ ಮೂಲಕ, ಭರತ ನಾಟ್ಯದಲ್ಲಿನ ನೃತ್ಯ ರೂಪಕಗಳಲ್ಲಿ, ಸಾಂಸ್ಕೃತಿಕವಾಗಿ ಆಚರಿಸಿಕೊಂಡು ಬಂದಿರುವುದು ಒಂದೆಡೆಯಾದರೆ, ಸಾಹಿತ್ಯದ ಒಳ ಅರಿವನ್ನು ಅರಿಯುವ ಹಾದಿಯಲ್ಲಿ ವಿಚಾರ ಗೋಷ್ಠಿಗಳು, ವಿಚಾರ ಸಂಕಿರಣ, ಸಂವಾದಗಳ ಮೂಲಕ ಅರ್ಥಪೂರ್ಣವಾಗಿ ನಡೆಸಿಕೊಂಡು ಬರುತ್ತಿದೆ. ಅದರ ಭಾಗವಾಗಿ ಈ ಬಾರಿ ವಿರಾಟ ಪುರ ವಿರಾಗಿ ಸಿನಿಮಾ ಪ್ರದರ್ಶನವಾಯಿತು.

ತುಂಬಿದ ಸಭಾಂಗಣದಲ್ಲಿ ವಿರಾಟಪುರ ವಿರಾಗಿ  ಚಲನಚಿತ್ರ ಪ್ರದರ್ಶನ, ವಚನ ಸಾಹಿತ್ಯದ ಬಗೆಗಿನ ವಿಚಾರ ಗೋಷ್ಠಿ, ವಚನ ಸ್ಪರ್ಧೆಗಳಲ್ಲಿನ ವಿಜೇತರಿಗೆ ಬಹುಮಾನ ವಿತರಣೆ ಕೊನೆಯಲ್ಲಿ ದಾಸೋಹದೊಂದಿಗೆ ಅನೇಕ ವಿಚಾರಗಳ ವಿವರಣೆ, ವಿಮರ್ಶೆ, ವಿತರಣೆ ಕಾರ್ಯಗಳು ಜರುಗಿದವು. ಕನ್ನಡ ಸಂಘ ಸಿಂಗಾಪುರ ಅಧ್ಯಕ್ಷ ವೆಂಕಟ ರತ್ನಯ್ಯ (Venkata Ratnaya)ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Web Stories

Share This Article