ಬೆಂಗಳೂರು: ವಿರಾಟ್ ಕೊಹ್ಲಿ(Virat kohli) ಮೊದಲ ಬಾರಿಗೆ ಬೆಂಗಳೂರಿನ (Bengaluru) ಹೊರವಲಯದಲ್ಲಿ ಬಿಸಿಸಿಐ ನಿರ್ಮಾಣ ಮಾಡಿರುವ ಸೆಂಟರ್ ಆಫ್ ಎಕ್ಸೆಲೆನ್ಸ್ (Centre of Excellence) ಮೈದಾನದಲ್ಲಿ ದೆಹಲಿ ಪರ ನಾಳೆ ಕಣಕ್ಕೆ ಇಳಿಯಲಿದ್ದಾರೆ.
ನಾಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ದೆಹಲಿ (Delhi) ಮತ್ತು ಆಂಧ್ರಪ್ರದೇಶ (Andhra Pradesh) ನಡುವಿನ ವಿಜಯ್ ಹಜಾರೆ (Vijay Hazare) ಟೂರ್ನಿಯ ಪಂದ್ಯಕ್ಕೆ ಅನುಮತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.
ಬೆಂಗಳೂರು ಪೊಲೀಸರು ಅನುಮತಿ ನಿರಾಕರಿಸಿದ ಕಾರಣ ಕೆಂಪೇಗೌಡ ವಿಮಾನ ನಿಲ್ದಾಣದ ಸಮೀಪ ಇರುವ ಸೆಂಟರ್ ಆಫ್ ಎಕ್ಸೆಲೆನ್ಸ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಈ ಪಂದ್ಯಗಳ ವೀಕ್ಷಣೆಗೆ ಪ್ರೇಕ್ಷಕರಿಗೆ ಅನುಮತಿ ಇಲ್ಲ.
40 ಎಕರೆ ವಿಸ್ತೀರ್ಣದ ಕ್ಯಾಂಪಸ್‌ನಲ್ಲಿರುವ ಸೆಂಟರ್ ಆಫ್ ಎಕ್ಸೆಲೆನ್ಸ್ ನಲ್ಲಿ ಮೂರು ಮೈದಾನಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರಥಮ ದರ್ಜೆ ಕ್ರಿಕೆಟ್ ಅನ್ನು ಆಯೋಜಿಸಲು ಐಸಿಸಿಯ ನಿಯಮಗಳ ಪ್ರಕಾರ ಈ ಮೈದಾನವನ್ನು ನಿರ್ಮಿಸಲಾಗಿದೆ. 2024 ರಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿಯಾಗಿದ್ದ ಜಯ್ ಶಾ ಸೆಂಟರ್ ಆಫ್ ಎಕ್ಸೆಲೆನ್ಸ್ ಕ್ಯಾಂಪಸ್ ಅನ್ನು ಉದ್ಘಾಟಿಸಿದ್ದರು.
ಅನುಮತಿ ನಿರಾಕರಣೆ ಯಾಕೆ?
ಪಂದ್ಯ ನಡೆಸುವ ಸಂಬಂಧ ಸೋಮವಾರ ಬೆಂಗಳೂರು ಆಯುಕ್ತ ಸೀಮಂತ್ ಕುಮಾರ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಅಗ್ನಿಶಾಮಕ ದಳದ ಅಧಿಕಾರಿಗಳು ಕ್ರೀಡಾಂಗಣಕ್ಕೆ ಆಗಮಿಸಿ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿದ್ದರು. ಪರಿಶೀಲನೆಯ ಬಳಿಕ ಈ ತಂಡ ಸರ್ಕಾರಕ್ಕೆ ವರದಿ ನೀಡಿತ್ತು. ಅಂತಿಮವಾಗಿ ಬೆಂಗಳೂರು ಪೊಲೀಸರು ಅನುಮತಿ ನಿರಾಕರಣೆ ಮಾಡಿದ್ದಾರೆ.
ಸ್ಟೇಡಿಯಂನಲ್ಲಿ ಇನ್ನಷ್ಟು ಸುರಕ್ಷತಾ ಕ್ರಮ ಅಳವಡಿಸಿಕೊಳ್ಳಬೇಕು ಎಂಬ ಅಭಿಪ್ರಾಯ ಬಂದಿದೆ. ಜೊತೆಗೆ ನಾಳೆ ಮ್ಯಾಚ್‌ಗೆ ವಿರಾಟ್ ಕೊಹ್ಲಿ ಆಗಮಿಸುವುದರಿಂದ ಹೊರಭಾಗದಲ್ಲಿ ಅಭಿಮಾನಿಗಳು ಸೇರುವ ಆತಂಕ ವ್ಯಕ್ತವಾಗಿದೆ.
I am delighted to announce the launch of the Centre of Excellence by @BCCI. The state-of-the-art facility features three world-class playing grounds, a swimming pool, a pavilion, and advanced training, recovery, and medical amenities. This initiative will help current and future… pic.twitter.com/Piudtr1AQN
— Jay Shah (@JayShah) September 29, 2024
ಸ್ಟೇಡಿಯಂ ಗೇಟ್ ಹೊರಭಾಗದಲ್ಲಿಯೇ ಕಾಲ್ತುಳಿತ ದುರಂತ ಸಂಭವಿಸಿತ್ತು. ಹೀಗಾಗಿ ನಾಳೆ ಮತ್ತಷ್ಟು ಅಭಿಮಾನಿಗಳು ಸೇರಿದರೆ ಕಷ್ಟ ಅನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಗೇಟ್ ಅಗಲೀಕರಣ ಮತ್ತು ಜನ ಒಡಾಡಲು ಅನುಕೂಲವಾಗುವ ವಾತಾವರಣವನ್ನು ಸ್ಟೇಡಿಯಂ ನಿರ್ಮಾಣ ಮಾಡದ ಕಾರಣ ಪೊಲೀಸರು ಪಂದ್ಯ ಆಯೋಜನೆಗೆ ಅನುಮತಿ ನೀಡಿಲ್ಲ.
ಪ್ರೇಕ್ಷಕರಿಗೆ ಅವಕಾಶ ಇಲ್ಲದೇ ಪಂದ್ಯ ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮುಖ್ಯಸ್ಥ ವೆಂಕಟೇಶ್ ಪ್ರಸಾದ್ ಗೃಹ ಸಚಿವ ಪರಮೇಶ್ವರ್ ಅವರಲ್ಲಿ ಮನವಿ ಮಾಡಿದ್ದರು.
ಕಳೆದ ಜೂನ್‌ನಲ್ಲಿ ಆರ್‌ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಮಂದಿ ಅಭಿಮಾನಿಗಳು ಸಾವನ್ನಪ್ಪಿದ್ದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನ ಸ್ಥಗಿತಗೊಳಿಸಲಾಗಿತ್ತು. ಇದೇ ಕಾರಣದಿಂದ ಮಹಿಳಾ ವಿಶ್ವಕಪ್ ಪಂದ್ಯ ಕೂಡ ಕೈತಪ್ಪಿತ್ತು.


