Cricket

ಡಬಲ್ ಸೆಂಚುರಿ ಮೆಷಿನ್ ಕೊಹ್ಲಿಯಿಂದ ವಿಶ್ವದಾಖಲೆ!

Published

on

Share this

ನವದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ದ್ವಿಶತಕ ಸಿಡಿಸಿ ರನ್ ಮೆಷಿನ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಈ ಹಿಂದೆ ನಾಯಕನಾಗಿದ್ದುಕೊಂಡು ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಬ್ರಿಯಾನ್ ಲಾರಾ 5 ದ್ವಿಶತಕ ಹೊಡೆದಿದ್ದರು. ಕಳೆದ ಪಂದ್ಯದಲ್ಲಿ ಈ ದಾಖಲೆಯನ್ನು ಸರಿದೂಗಿಸಿದ್ದ ಕೊಹ್ಲಿ ಈ ಪಂದ್ಯದಲ್ಲೂ ದ್ವಿಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ.

ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್, ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಮತ್ತು ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ ನಾಯಕನಾಗಿದ್ದುಕೊಂಡು 4 ದ್ವಿಶತಕ ಸಿಡಿಸಿದ್ದಾರೆ. ಪಂದ್ಯದ ಎರಡನೇ ದಿನವಾದ ಇಂದು ಕೊಹ್ಲಿ 238 ಎಸೆತಗಳಲ್ಲಿ 20 ಬೌಂಡರಿ ಸಿಡಿಸಿ 200 ರನ್ ಹೊಡೆದರು. ಕೊಹ್ಲಿ ಅಂತಿಮವಾಗಿ 243 ರನ್(287 ಎಸೆತ, 25 ಬೌಂಡರಿ) ಗಳಿಸಿದ್ದಾಗ ಎಲ್‍ಬಿಯಾಗಿ 7ನೇಯವರಾಗಿ ಔಟಾದರು.

ಟೆಸ್ಟ್ ಕ್ರಿಕೆಟ್ ನಲ್ಲಿ ನಲ್ಲಿ ಅತಿ ಹೆಚ್ಚು ದ್ವಿಶತಕ ದಾಖಲಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ವಿರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡೂಲ್ಕರ್ ಜೊತೆ ಕೊಹ್ಲಿ ಈಗ ಸ್ಥಾನ ಪಡೆದಿದ್ದಾರೆ. ರಾಹುಲ್ ದ್ರಾವಿಡ್ 5 ದ್ವಿಶತಕ, ಸುನಿಲ್ ಗವಾಸ್ಕರ್ 4 ದ್ವಿಶತಕ ದಾಖಲಿಸಿದ್ದಾರೆ. ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ದ್ವಿಶತಕ ಹೊಡೆದ ವಿಶ್ವದಾಖಲೆ ಡಾನ್ ಬ್ರಾಡ್ಮನ್ ಹೆಸರಿನಲ್ಲಿದೆ. ಬ್ರಾಡ್ಮನ್ 12 ದ್ವಿಶತಕ ಹೊಡೆದಿದ್ದಾರೆ.

ಕೊಹ್ಲಿ 2011 ರಿಂದ 2015ರವರೆಗೆ 41 ಟೆಸ್ಟ್ ಪಂದ್ಯಗಳ 72 ಇನ್ನಿಂಗ್ಸ್ ಗಳಲ್ಲಿ ಒಂದೇ ಒಂದು ದ್ವಿಶತಕ ಸಿಡಿಸಿರಲಿಲ್ಲ. ಆದರೆ 2016ರ ನಂತರ 22 ಟೆಸ್ಟ್, 33 ಇನ್ನಿಂಗ್ಸ್ ನಲ್ಲಿ 6 ದ್ವಿಶತಕ ಸಿಡಿಸಿರುವುದು ವಿಶೇಷ. ಇನ್ನೊಂದು ವಿಶೇಷ ಏನೆಂದರೆ 2016 ರ ಜುಲೈನಿಂದ ವಿಶ್ವದ ಯಾವೊಬ್ಬ ನಾಯಕ ದ್ವಿಶತಕ ಹೊಡೆದಿಲ್ಲ. ಹೀಗಾಗಿ ಈಗ ಕೊಹ್ಲಿ ಏಕದಿನದಲ್ಲಿ ಸಂಚುರಿ ಮೆಷಿನ್ ಆದಂತೆ ಟೆಸ್ಟ್ ನಲ್ಲೂ ಈಗ ಡಬಲ್ ಸೆಂಚುರಿ ಮೆಷಿನ್ ಆಗುತ್ತಿದ್ದಾರೆ.

ಕೊಹ್ಲಿಯ ದ್ವಿಶತಕಗಳು: 2016 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಂಟಿಗುವಾದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ 200 ರನ್ ಗಳಿಸುವ ಮೂಲಕ ಮೊದಲ ದ್ವಿಶತಕ ದಾಖಲಿಸಿದ್ದರು. ನಂತರ ಇಂದೋರ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ 211 ರನ್, ಮುಂಬೈ  ವಾಂಖೆಡೆಯಲ್ಲಿ  ಇಂಗ್ಲೆಂಡ್ ವಿರುದ್ಧ ಅತ್ಯಧಿಕ 235 ರನ್ ಹಾಗೂ ಹೈದರಾಬಾದ್ ನಲ್ಲಿ ಬಾಂಗ್ಲಾದೇಶ ವಿರುದ್ಧ 204 ರನ್ ಹೊಡೆದಿದ್ದರು. ಲಂಕಾ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ 213 ರನ್ ಸಿಡಿಸಿದ್ದರು.

ಅಮೋಘ ಇನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದಾರೆ. 39 ರನ್ ಗಳಿಸಿದ್ದಾಗ ಅಂತಾರಾಷ್ಟ್ರೀಯ ಕ್ರಿಕೆಟ್‍ನ ಮೂರು ಮಾದರಿಯಲ್ಲಿ ಕೇವಲ 350 ಇನ್ನಿಂಗ್ಸ್ ನಲ್ಲಿ ವೇಗವಾಗಿ 16 ಸಾವಿರ ರನ್ ಪೂರ್ಣಗೊಳಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಹಶೀಮ್ ಆಮ್ಲಾ 363 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದರೆ, ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರಾ 374 ಎಸೆತದಲ್ಲಿ ಈ ಸಾಧನೆ ಮಾಡಿದ್ದರು.

ಕೊಹ್ಲಿ 123 ರನ್ ಗಳಿಸಿದ್ದಾಗ ಟೆಸ್ಟ್ ವೃತ್ತಿಜೀವನದ 105ನೇ ಇನಿಂಗ್ಸ್ ನಲ್ಲಿ  5000 ರನ್‍ಗಳ ಗಡಿ ಮುಟ್ಟಿದ್ದಾರೆ. ಟೆಸ್ಟ್ ನಲ್ಲಿ  5000 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಭಾರತದ 11ನೇ ಆಟಗಾರನೆಂಬ ಹಿರಿಮೆಗೆ ಕೊಹ್ಲಿ ಈಗ ಪಾತ್ರರಾಗಿದ್ದಾರೆ.

ಕೊಹ್ಲಿ ಬ್ಯಾಟಿಂಗ್ ಅಬ್ಬರ ಹೀಗಿತ್ತು
50 ರನ್ – 52 ಎಸೆತ, 4 ಬೌಂಡರಿ
100 ರನ್ – 110 ಎಸೆತ, 14 ಬೌಂಡರಿ
150 ರನ್ – 178 ಎಸೆತ, 16 ಬೌಂಡರಿ
200 ರನ್ – 238 ಎಸೆತ, 20 ಬೌಂಡರಿ
243 ರನ್ – 287 ಎಸೆತ, 25 ಬೌಂಡರಿ

 

Click to comment

Leave a Reply

Your email address will not be published. Required fields are marked *

Advertisement
Advertisement