ಅಹಮದಾಬಾದ್: 18 ವರ್ಷಗಳ ವನವಾಸ ಕೊನೆಗೂ ಅಂತ್ಯಗೊಂಡಿದೆ. 18ರ ನಂಟಿಗೆ ಜಯ ಸಿಕ್ಕಿದೆ. ಆರ್‌ಸಿಬಿ ಕಪ್ ಗೆಲ್ಲುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳಲ್ಲಿ ಆನಂದಬಾಷ್ಪ ಉಕ್ಕಿ ಹರಿಯಿತು. ಗೆಲುವು ಖಚಿತವಾಗುತ್ತಿದ್ದಂತೆ ವಿರಾಟ್ ಕೊಹ್ಲಿ ಕಣ್ಣೀರು ತಡೆಯಲಾಗಲಿಲ್ಲ. ಕಣ್ಣಲ್ಲಿ ನೀರು ತುಂಬಿಕೊಂಡು ಅತ್ತುಬಿಟ್ಟರು.
18 ಆವೃತ್ತಿಗಳಲ್ಲಿ ಯಾವುದೇ ತಂಡಕ್ಕೆ ಹೋಗದೇ ಹಠ ಹಿಡಿದು ಆರ್‌ಸಿಬಿಯಲ್ಲೇ ಇದ್ದ ವಿರಾಟ್ ಕೊಹ್ಲಿ ಟ್ರೋಫಿ ಗೆಲ್ಲುವ ಆಸೆ ಕೊನೆಗೂ ಈಡೇರಿದೆ. ಕಪ್ ಗೆಲುವು ಖಚಿತವಾಗುತ್ತಿದ್ದಂತೆ ಕೊಹ್ಲಿ ಭಾವುಕರಾಗಿ ಕಣ್ಣೀರಿಟ್ಟರು. ಆ ಒಂದು ಕ್ಷಣ ಅಭಿಮಾನಗಳು ತೃಪ್ತಿ ಭಾವದ ಕಣ್ಣೀರು ಹರಿಸಿದರು.
ಪಂಜಾಬ್ ವಿರುದ್ಧದ ಪಂದ್ಯ ಕೊನೆವರೆಗೂ ರೋಚಕತೆಯಿಂದ ಕೂಡಿತ್ತು. ಗೆಲುವು ಖಚಿತವಾಗುತ್ತಿದ್ದಂತೆ ಆರ್‌ಸಿಬಿ ಆಟಗಾರರೆಲ್ಲರೂ ಮೈದಾನದಲ್ಲಿ ಭಾವುಕರಾದರು. ಯಾರಲ್ಲೂ ಕಣ್ಣೀರು ತಡೆಯಲು ಆಗಲಿಲ್ಲ. ಈ ಕ್ಷಣ ನೋಡಿ ಅಭಿಮಾನಿಗಳಲ್ಲು ಕೂಡ ಸಂತಸದ ಹೊನಲು ಕಣ್ಣಲ್ಲಿ ಹರಿಯಿತು.
ಈ ವೇಳೆ ಮೈದಾನಕ್ಕೆ ಎಂಟ್ರಿ ಕೊಟ್ಟ ದಂತಕಥೆ ಎಬಿ ಡಿವಿಲಿಯರ್ಸ್ ಅವರನ್ನು ಬಿಗಿದಪ್ಪಿಕೊಂಡು ವಿರಾಟ್ ಕೊಹ್ಲಿ ಕಣ್ಣೀರು ಹಾಕಿದರು. ಎಬಿಡಿ ಕೂಡ ಅಷ್ಟೇ ಭಾವುಕತೆಯಿಂದ ಕೊಹ್ಲಿಯನ್ನು ತಬ್ಬಿಕೊಂಡರು. ಈ ಸನ್ನಿವೇಶ ಕೂಡ ವಿಶೇಷವಾಗಿತ್ತು.
ವಿರಾಟ್ ಕೊಹ್ಲಿಗೆ ನಿಜವಾಗಿಯೂ ಇದು ವಿಶೇಷ ದಿನ. ಐಪಿಎಲ್‌ನ 18ನೇ ಆವೃತ್ತಿ ಇದು. ಕೊಹ್ಲಿ ಜೆರ್ಸಿ ನಂಬರ್ 18. ಒಂದಕ್ಕೊಂದು ವಿಶೇಷ ನಂಟು. ಕೊಹ್ಲಿಗೆ ಸಂದ ಗೌರವ ಆರ್‌ಸಿಬಿಗೆ ಸಿಕ್ಕ ಗೆಲುವು.