Connect with us

Cricket

ದ್ವಿಶತಕ ಸಿಡಿಸಿ ಸೆಹ್ವಾಗ್, ಸಚಿನ್ ದಾಖಲೆ ಮುರಿದ ಕಿಂಗ್ ಕೊಹ್ಲಿ

Published

on

– ಕೊಹ್ಲಿ, ಜಡೇಜಾ 205 ರನ್‍ಗಳ ಜೊತೆಯಾಟ
– 601 ರನ್ ಗಳಿಸಿದ್ದಾಗ ಡಿಕ್ಲೇರ್ ಘೋಷಿಸಿದ ಭಾರತ

ಪುಣೆ: ಇಂದು ದಕ್ಷಿಣ ಅಫ್ರಿಕಾದ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿರುವ ಕೊಹ್ಲಿ ಮಾಜಿ ಆಟಗಾರರಾದ ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಇಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ 295 ಎಸೆತಗಳಲ್ಲಿ 28 ಬೌಂಡರಿ ಸಿಡಿಸುವ ಮೂಲಕ 7ನೇ ದ್ವಿಶತಕ ಹೊಡೆದರು. 79 ಟೆಸ್ಟ್ ಪಂದ್ಯಗಳಲ್ಲಿ 7 ದ್ವಿಶತಕ ಸಿಡಿಸುವ ಮೂಲಕ ಈ ಹಿಂದೆ ಭಾರತದ ಪರ ತಲಾ ಆರು ದ್ವಿಶತಕ ಸಿಡಿಸಿದ್ದ ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು.

ಭಾರತ 156.3 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 601 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. 91 ರನ್ (104 ಎಸೆತ, 8 ಬೌಂಡರಿ, 2 ಸಿಕ್ಸರ್) ಗಳಿಸಿದ್ದಾಗ ಬಲವಾದ ಹೊಡೆತ ಹೊಡೆಯಲು ಜಡೇಜಾ ಹೋಗಿ ವಿಕೆಟ್ ಒಪ್ಪಿಸಿದರು. ಜಡೇಜಾ ಔಟಾಗುತ್ತಿದ್ದಂತೆ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವುದಾಗಿ ಘೋಷಿಸಿದರು.

ಎರಡನೇ ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿ ತಾನು ಎದುರಿಸಿದ 91 ಎಸೆತದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ನಂತರ 173 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದ ಕೊಹ್ಲಿ 295 ಎಸೆತಗಳಲ್ಲಿ 200 ರನ್‍ಗಳ ಗಡಿ ದಾಟಿದರು. ಈ ಮೂಲಕ ವಿಶ್ವದಲ್ಲೇ ಅತೀ ಹೆಚ್ಚು ಟೆಸ್ಟ್ ದ್ವಿಶತಕ ಸಿಡಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕೇರಿದರು. ಅಂತಿಮವಾಗಿ ಕೊಹ್ಲಿ ಔಟಾಗದೇ 254 ರನ್(336 ಎಸೆತ, 33 ಬೌಂಡರಿ, 2 ಸಿಕ್ಸರ್) ಹೊಡೆದರು. ಕೊಹ್ಲಿ ಮತ್ತು ಜಡೇಜಾ 5ನೇ ವಿಕೆಟಿಗೆ 225 ರನ್ ಗಳ ಜೊತೆಯಾಟವಾಡಿದ್ದರಿಂದ ಭಾರತ 600 ರನ್ ಗಳ ಗಡಿಯನ್ನು ದಾಟಿತು.

ಕೊಹ್ಲಿ ಅವರನ್ನು ಬಿಟ್ಟರೆ ಅತಿ ಹೆಚ್ಚು ಟೆಸ್ಟ್ ದ್ವಿಶತಕ ಸಿಡಿಸಿದವರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಲೆಜೆಂಡ್ ಆಟಗಾರ ಡಾನ್ ಬ್ರಾಡ್ಮನ್ ಅವರು 12 ದ್ವಿಶತಕ ಸಿಡಿಸಿ ಮೊದಲ ಸ್ಥಾನದಲ್ಲಿ ಇದ್ದಾರೆ. ನಂತರ ಎರಡನೇ ಸ್ಥಾನದಲ್ಲಿ 11 ದ್ವಿಶತಕ ಸಿಡಿಸಿರುವ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ ಇದ್ದಾರೆ. 9 ದ್ವಿಶತಕ ಸಿಡಿಸಿರುವ ವೆಸ್ಟ್ ಇಂಡೀಸ್ ದೈತ್ಯ ಆಟಗಾರ ಬ್ರಿಯಾನ್ ಲಾರಾ ಮೂರನೇ ಸ್ಥಾನದಲ್ಲಿ ಇದ್ದಾರೆ.

ಈ ಪಂದ್ಯದಲ್ಲಿ ಏಳನೇ ದ್ವಿಶತಕ ಸಿಡಿಸಿರುವ ಕೊಹ್ಲಿ ಭಾರತದ ಪರ ಟೆಸ್ಟ್ ಕ್ರಿಕೆಟ್‍ನಲ್ಲಿ 7 ಸಾವಿರ ರನ್ ಗಳಿಸಿದ ಭಾರತದ ಏಳನೇ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ ಉಪನಾಯಕ ಅಜಿಂಕ್ಯ ರಹಾನೆ ಜೊತೆಗೆ 178 ರನ್‍ಗಳ ಜೊತೆಯಾಟವಾಡಿದ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕನೇ ವಿಕೆಟ್‍ಗೆ ಅತಿ ಹೆಚ್ಚು ರನ್ ಹೊಡೆದ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ತವರಿನಲ್ಲಿ ಸೌತ್ ಆಫ್ರಿಕಾ ತಂಡದ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರುವ ಭಾರತ, ಮೊದಲ ಟೆಸ್ಟ್ ನಲ್ಲಿ ರೋಹಿತ್ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್ ಮತ್ತು ಮೊಹಮ್ಮದ್ ಶಮಿ ಅವರ ಮಾರಕ ಬೌಲಿಂಗ್ ದಾಳಿಯಿಂದ 203 ರನ್‍ಗಳ ಅಂತರದಲ್ಲಿ ಗೆದ್ದು ಬೀಗಿತ್ತು. ಈಗ ಎರಡನೇ ಟೆಸ್ಟ್ ಆರಂಭವಾಗಿದ್ದು, ಮೊದಲು ಬ್ಯಾಟ್ ಮಾಡುತ್ತಿರುವ ಭಾರತ ಮಯಾಂಕ್ ಅಗರವಾಲ್ ಶತಕ ಮತ್ತು ಕೊಹ್ಲಿ ದ್ವಿಶತಕದಿಂದ ಪಂದ್ಯದ ಮೇಲೆ ಉತ್ತಮ ಹಿಡಿತ ಸಾಧಿಸಿದೆ.

Click to comment

Leave a Reply

Your email address will not be published. Required fields are marked *