Connect with us

ವಿರಾಟ್ ಕೊಹ್ಲಿಯ ಜಾಹಿರಾತು ಸಂಭಾವನೆ ಹೆಚ್ಚಳ- 1 ದಿನದ ಸಂಭಾವನೆ ಎಷ್ಟು ಗೊತ್ತಾ?

ವಿರಾಟ್ ಕೊಹ್ಲಿಯ ಜಾಹಿರಾತು ಸಂಭಾವನೆ ಹೆಚ್ಚಳ- 1 ದಿನದ ಸಂಭಾವನೆ ಎಷ್ಟು ಗೊತ್ತಾ?

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜಾಹಿರಾತಿಗಾಗಿ ಪಡೆಯುವ ಸಂಭಾವನೆಯ ಮೊತ್ತವನ್ನ ಹೆಚ್ಚಿಸಿಕೊಂಡಿದ್ದಾರೆ. ಈಗ ಕೊಹ್ಲಿಯ ಜಾಹಿರಾತು ಸಂಭಾವನೆ 1 ದಿನಕ್ಕೆ 5 ಕೋಟಿ ರೂ. ಆಗಿದ್ದು, ದೇಶದಲ್ಲೇ ಅತೀ ಹೆಚ್ಚು ಮೊತ್ತದ ಸಂಭಾವನೆ ಪಡೆಯುವ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ.

ಈ ಹಿಂದೆ ಕೊಹ್ಲಿಯ ಸಂಭಾವನೆ ಒಂದು ದಿನಕ್ಕೆ 2.5 ಕೋಟಿ ಯಿಂದ 4 ಕೋಟಿ ರೂ.ವರೆಗೆ ಇತ್ತು. ಕೊಹ್ಲಿಯ ಪೆಪ್ಸಿಕೋ ಕಂಪೆನಿಯ ಜಾಹಿರಾತಿನ ಒಪ್ಪಂದ ಏಪ್ರಿಲ್ 30ಕ್ಕೆ ಮುಗಿಯಲಿದ್ದು, ಇದರ ನವೀಕರಣದ ಬಗ್ಗೆ ಮಾತುಕತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೊಹ್ಲಿ ಸಂಭಾವನೆ ಹೆಚ್ಚಳದ ವಿಷಯ ಹೊರಬಿದ್ದಿದೆ. ಆದ್ರೆ ತಂಪುಪಾನೀಯಗಳಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂಬ ಕಾರಣದಿಂದ ಕೊಹ್ಲಿ ಪೆಪ್ಸಿ ಒಪ್ಪಂದವನ್ನ ಮುಂದುವರೆಸುತ್ತಾರಾ ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಸಾಮಾನ್ಯವಾಗಿ ಕಂಪೆನಿಗಳು ಸೆಲೆಬ್ರಿಟಿಗಳೊಂದಿಗೆ ವರ್ಷದಲ್ಲಿ 2 ರಿಂದ 4 ದಿನಗಳ ಒಪ್ಪಂದ ಮಾಡಿಕೊಂಡಿರುತ್ತಾರೆ. ಈ ಒಪ್ಪಂದದ ದಿನಗಳಲ್ಲಿ ಸೆಲೆಬ್ರಿಟಿಗಳು ಜಾಹಿರಾತಿನ ಚಿತ್ರೀಕರಣ, ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು, ಅಭಿಮಾನಿಗಳೊಂದಿಗೆ ಮಾತನಾಡುವುದು ಅಥವಾ ಮಾಧ್ಯಮ ಮತ್ತು ಕಂಪೆನಿಯ ಸಿಬ್ಬಂದಿಯನ್ನು ಭೇಟಿ ಮಡುವಂತೆ ಕಂಪೆನಿಗಳು ಕೇಳಬಹುದು. ಹೀಗಾಗಿ ದಿನಕ್ಕೆ 5 ಕೋಟಿ ರೂ ಎಂದಾದರೆ ಒಂದು ಬ್ರ್ಯಾಂಡ್‍ಗೆ ವರ್ಷದಲ್ಲಿ 4 ದಿನಗಳಿಗೆ ಕೊಹ್ಲಿ ಸಂಭಾವನೆ 20 ಕೋಟಿ ರೂ. ಆಗುತ್ತದೆ.

ಕೊಹ್ಲಿ ಜಾಹಿರಾತು ನೀಡುತ್ತಿರುವ ಎರಡು ಪ್ರಮುಖ ಬ್ರಾಂಡ್‍ಗಳ ಅಧಿಕಾರಿಗಳು ಸಂಭಾವನೆ ಹೆಚ್ಚಳದ ವಿಷಯವನ್ನ ಸ್ಪಷ್ಟಪಡಿಸಿದ್ದಾರೆ. ಸದ್ಯ ಕೊಹ್ಲಿ ಪಡೆಯುತ್ತಿರುವ ಸಂಭಾವನೆ ಈ ಹಿಂದೆ ಮಹೇಂದ್ರ ಸಿಂಗ್ ಧೋನಿ ಪಡೆಯುತ್ತಿದ್ದ ಸಂಭಾವನೆ ಹಾಗೂ ಬಾಲಿವುಡ್ ಸ್ಟಾರ್‍ಗಳಾದ ರಣವೀರ್ ಸಿಂಗ್ ಮತ್ತು ರಣಬೀರ್ ಕಪೂರ್ ಅವರ ಸಂಭಾವನೆಯನ್ನೂ ಮೀರಿಸಿದೆ.

ಬೇರೆ ಸೆಲೆಬ್ರಿಟಿಗಳ ಸಂಭಾವನೆ ಎಷ್ಟು: ವರದಿಯ ಪ್ರಕಾರ ಮಾಜಿ ನಾಯಕ ಎಂಎಸ್ ಧೋನಿ ಒಂದು ದಿನಕ್ಕೆ 3 ರಿಂದ 3.5 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಇನ್ನು ಬಾಲಿವುಡ್ ಸ್ಟಾರ್ ಶಾರೂಖ್ ಖಾನ್ ಹಾಗೂ ಆಮೀರ್ ಖಾನ್ ಕೂಡ ಒಂದು ದಿನಕ್ಕೆ ಪಡೆಯುವ ಸಂಭಾವನೆ 3 ರಿಂದ 3.5 ಕೋಟಿ ರೂ. ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಒಂದು ದಿನಕ್ಕೆ 1 ರಿಂದ 1.25 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. (ಈ ಮೊತ್ತ ಕೇವಲ ಅಂದಾಜು ಮೊತ್ತವಾಗಿದ್ದು ಒಂದು ಬ್ರ್ಯಾಂಡ್‍ನಿಂದ ಮತ್ತೊಂದು ಬ್ರ್ಯಾಂಡ್‍ಗೆ ವ್ಯತ್ಯಯವಾಗುತ್ತದೆ. ಕೆಲವೊಂದು ಒಪ್ಪಂದಗಳು ಕೇವಲ ಆನ್‍ಲೈನ್‍ಗಾಗಿ ಮಾತ್ರ ಮಾಡಿಕೊಂಡಿದ್ದರೆ ಸಂಭಾವನೆ ಕಡಿಮೆ ಇರುತ್ತದೆ.)

ಕಳೆದ ತಿಂಗಳು ಕೊಹ್ಲಿ ಪೂಮಾದೊಂದಿಗೆ 110 ಕೋಟಿ ರೂ. ಗಳ 8 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ಮೂಲಕ ಕೊಹ್ಲಿ 100 ಕೋಟಿ ರೂ. ಮೀರಿಸಿದ ಒಪ್ಪಂದಕ್ಕೆ ಸಹಿ ಹಾಕಿದ ಮೊದಲ ಭಾರತೀಯ ಕ್ರೀಡಾಪಟು ಎನಿಸಿಕೊಂಡರು. ಇದರ ಜೊತೆಗೆ ಕೊಹ್ಲಿ ಆಡಿ, ಎಮ್‍ಆರ್‍ಎಫ್ ಟೈರ್ಸ್ , ಟಿಸ್ಸಾಟ್ ವಾಚ್, ಜಿಯೋನಿ ಫೋನ್, ಬೂಸ್ಟ್, ಕೋಲ್ಗೇಟ್, ವಿಕ್ಸ್ ಸೇರಿದಂತೆ 18 ಬ್ರ್ಯಾಂಡ್‍ಗಳಿಗೆ ಜಾಹಿರಾತು ನೀಡುತ್ತಿದ್ದಾರೆ.