ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಭಾನುವಾರ ನಡೆದ ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ಯುವ ಆಟಗಾರ ಶಾರ್ದೂಲ್ ಠಾಕೂರ್ ಅವರ ಪ್ರದರ್ಶನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಶಾರ್ದೂಲ್‍ರ ಫೋಟೋ ಟ್ವೀಟ್ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪಂದ್ಯ ಮುಕ್ತಾಯವಾದ ಬಳಿಕ ಗೆಲುವಿಗೆ ಕಾರಣರಾಗಿದ್ದ ಶಾರ್ದೂಲ್ ಹಾಗೂ ಜಡೇಜಾಗೆ ಕೊಹ್ಲಿ ಅಭಿನಂದನೆ ತಿಳಿಸಿದ್ದರು. ಅಲ್ಲದೇ ಶಾರ್ದೂಲ್ ಭುಜದ ಮೇಲೆ ಕೊಹ್ಲಿ ಪದೆ ಪದೆ ಕೈ ಹಾಕಿ ಪ್ರಶಂಸೆ ವ್ಯಕ್ತಪಡಿಸುತ್ತಿದದ್ದು ಕಂಡು ಬಂದಿತ್ತು. ಆ ಬಳಿಕ ಟ್ವಿಟ್ಟರ್ ನಲ್ಲಿ ಫೋಟೋ ಹಂಚಿಕೊಂಡಿರುವ ಕೊಹ್ಲಿ, ಮರಾಠಿಯಲ್ಲೇ ಶಾರ್ದೂಲ್ ಅವರಿಗೆ ಅಭಿನಂದನೆ ಸಲ್ಲಿಸಿದ್ದರು. ಶಾರ್ದೂಲ್‍ರ ಫೋಟೋಗೆ ಮರಾಠಿಯಲ್ಲಿ ‘ತುಲಾ ಮಾನ್ಲಾ ರೆ ಠಾಕೂರ್’ (ಹ್ಯಾಟ್ಸ್ ಆಫ್ ಠಾಕೂರ್) ಎಂಬ ಹೆಡ್ ಲೈನ್ ನೀಡಿದ್ದರು.
ಕೊಹ್ಲಿರ ಈ ಟ್ವೀಟ್‍ಗೆ ಅಭಿಮಾನಿಗಳು ಕೂಡ ಹೆಚ್ಚು ಪ್ರತಿಕ್ರಿಯೆ ನೀಡುತ್ತಿದ್ದು, ಶಾರ್ದೂಲ್‍ರ ಅತ್ಯುತ್ತಮ ಇನ್ನಿಂಗ್ಸ್ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಪಂದ್ಯದ ಬಳಿಕ ತಾನು ಠಾಕೂರ್ ಅಭಿಮಾನಿಯಾದೆ ಎಂದು ಅಭಿಮಾನಿಯೊಬ್ಬ ಟ್ವೀಟ್ ಮಾಡಿದ್ದಾರೆ.
ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಔಟಾದಾಗ ಭಾರತ ಗೆಲ್ಲುತ್ತಾ ಎನ್ನುವ ಪ್ರಶ್ನೆ ಎದ್ದಿತ್ತು. ಆದರೆ ಕೊನೆಯ ಸ್ಲಾಗ್ ಓವರ್ ಗಳಲ್ಲಿ ಶಾರ್ದೂಲ್ ಠಾಕೂರ್ ಎರಡು ಬೌಂಡರಿ, ಒಂದು ಸಿಕ್ಸರ್ ಚಚ್ಚಿ ಪಂದ್ಯಕ್ಕೆ ತಿರುವುಕೊಟ್ಟಿದ್ದರು. ಕೊನೆಯಲ್ಲಿ ಜಡೇಜಾ ಉತ್ತಮವಾಗಿ ಆಡಿದ್ದರಿಂದ ವಿಂಡೀಸ್ ನೀಡಿದ್ದ 316 ರನ್ ಗಳ ಗುರಿಯನ್ನು ಟೀಂ ಇಂಡಿಯಾ ಇನ್ನೂ 8 ಎಸೆತ ಇರುವಂತೆಯೇ ಜಯಗಳಿಸಿತ್ತು.
46.1 ಓವರಿನಲ್ಲಿ ವಿರಾಟ್ ಕೊಹ್ಲಿ 85 ರನ್ (81ಎಸೆತ, 9 ಬೌಂಡರಿ)ಗಳಿಸಿ 6ನೇಯವರಾಗಿ ಔಟಾದಾಗ ಭಾರತದ ಸ್ಕೋರ್ 286 ಆಗಿತ್ತು. ಈ ವೇಳೆ ಕ್ರೀಸಿಗೆ ಆಗಮಿಸಿದ ಶಾರ್ದೂಲ್ ಠಾಕೂರ್ ಮೊದಲ ಎಸೆತವನ್ನೇ ಬೌಂಡರಿಗೆ ಅಟ್ಟಿ ನಂತರ 17 ರನ್ (6 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದರು. ಜಡೇಜಾ ಮತ್ತು ಶಾರ್ದೂಲ್ 7ನೇ ವಿಕೆಟಿಗೆ 15 ಎಸೆತಗಳಲ್ಲಿ 30 ರನ್ ಹೊಡೆಯುವ ಮೂಲಕ ಜಯವನ್ನು ತಂದಿಟ್ಟರು. ಜಡೇಜಾ ಔಟಾಗದೇ 39ರನ್ (31 ಎಸೆತ, 4 ಬೌಂಡರಿ) ಗಳಿಸಿದ್ದರು.
Tula maanla re Thakur ???????????? @imShard pic.twitter.com/fw9z3dZ8Zi
— Virat Kohli (@imVkohli) December 23, 2019
ಭಾರತ ತಂಡಕ್ಕೆ ಆರಂಭಿಕರಾದ ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಉಪನಾಯಕ ರೋಹಿತ್ ಶರ್ಮಾ ಅವರು ಉತ್ತಮ ಆರಂಭ ನೀಡಿದ್ದರು. ಮೊದಲ ವಿಕೆಟ್‍ಗೆ ಶತಕದ ಜೊತೆಯಾಟವಾಡಿದ ಈ ಜೋಡಿ ತಂಡಕ್ಕೆ 122 ರನ್‍ಗಳ ಕಾಣಿಕೆ ನೀಡಿತ್ತು. ರೋಹಿತ್ 63 ರನ್ (63 ಎಸೆತ, 8 ಬೌಂಡರಿ, 1 ಸಿಕ್ಸರ್), ರಾಹುಲ್ 77 ರನ್ (89 ಎಸೆತ, 8 ಬೌಂಡರಿ, 1 ಸಿಕ್ಸರ್) ಗಳಿಸಿದ್ದರೆ, ಕೊಹ್ಲಿ 85 ರನ್ (81 ಎಸೆತ, 9 ಬೌಂಡರಿ) ಸಿಡಿಸಿದ್ದರು.