– ಆರ್‌ಸಿಬಿ ಕಪ್ ಗೆದ್ದೇ ಗೆಲ್ಲುತ್ತೆ ಎಂದ ಚಿನ್ನಾ
ರಾಯಚೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ತಂಡಗಳ ನಡುವೆ ನಡೆಯುತ್ತಿದ್ದ ಟಿ20 ಐಪಿಎಲ್ ಪಂದ್ಯದ ವೇಳೆ ಏಕಾಏಕಿ ಕ್ರೀಡಾಂಗಣದಲ್ಲಿ ನುಗ್ಗಿ ವಿರಾಟ್ ಕೊಹ್ಲಿ ಕಾಲಿಗೆ ಬಿದ್ದು, ತಬ್ಬಿಕೊಂಡಿದ್ದ ರಾಯಚೂರಿನ (Raichuru) ಎಲ್‌ಬಿಎಸ್ ನಗರ ಯುವಕ ಅಭಿಮಾನಿ ಚಿನ್ನಾ ಈಗ ರಾಯಚೂರಿಗೆ ಮರಳಿದ್ದು ಖುಷಿಯಲ್ಲಿ ತೇಲಾಡುತ್ತಿದ್ದಾನೆ.
ಭದ್ರತಾ ಸಿಬ್ಬಂದಿ ಭದ್ರತೆಯನ್ನ ಮೀರಿ ಒಳನುಗ್ಗಿದ್ದಕ್ಕೆ ಮನಸೋಇಚ್ಚೆ ಥಳಿಸಿದ್ದರು. ಮಾನವ ಹಕ್ಕುಗಳ ಉಲ್ಲಂಘನೆ ಆರೋಪದಲ್ಲಿ ಮಾನವ ಹಕ್ಕು ಆಯೋಗಕ್ಕೆ ದೂರು ಕೂಡ ಸಲ್ಲಿಕೆಯಾಗಿದೆ. ಆದ್ರೆ ಇದ್ಯಾವುದರ ಪರಿವೇ ಇಲ್ಲದ ವಿರಾಟ್ ಕೊಹ್ಲಿ (Virat Kohli) ಅಭಿಮಾನಿ ಚಿನ್ನಾ ನನಗೆ ವಿರಾಟ್ ಕೊಹ್ಲಿಯನ್ನ ನೋಡಬೇಕಿತ್ತು, ಮಾತನಾಡಿಸಬೇಕಿತ್ತು. ಅದಕ್ಕೆ ಕ್ರೀಡಾಂಗಣ ಒಳಗೆ ನುಗ್ಗಿದ್ದೆ. ಹಾಗೇ ನುಗ್ಗುವುದು ತಪ್ಪು ಅನ್ನೋದು ನನಗೆ ಗೊತ್ತಿಲ್ಲ. ಕೊಹ್ಲಿಯನ್ನ ಮಾತನಾಡಿಸಬೇಕು ಅನ್ನೋದಷ್ಟೆ ನನ್ನ ಗುರಿಯಾಗಿತ್ತು ಅಂತ ಹೇಳಿದ್ದಾನೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಕೊಹ್ಲಿ ಅಭಿಮಾನಿಗೆ ಥಳಿತ – ಮಾನವ ಹಕ್ಕುಗಳ ಆಯೋಗಕ್ಕೆ ದೂರು
ಅಲ್ಲಿನ ಭದ್ರತಾ ಸಿಬ್ಬಂದಿ ನನಗೆ ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ರು. ಪೊಲೀಸರು ಚಿಕಿತ್ಸೆ ಕೊಡಿಸಿ ಬಿಟ್ಟಿದ್ದಾರೆ. ವಿರಾಟ್ ಕೊಹ್ಲಿಯನ್ನ ನೋಡಿರುವ ಖುಷಿಯಲ್ಲಿ ನನಗೆ ಯಾವ ಏಟುಗಳು ನೋವು ಕೊಟ್ಟಿಲ್ಲ. ನನಗೆ ಥಳಿಸಿದ್ದಕ್ಕೆ ದೂರು ದಾಖಲಾಗಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾನೆ. ರಾಯಚೂರಿಗೆ ಮರಳಿದ ಮೇಲೆ ಪೊಲೀಸರು ಆಧಾರ್ ಕಾರ್ಡ್ ಹಾಕುವಂತೆ ಫೋನ್ ಮಾಡಿದ್ರು ಅಷ್ಟೇ ಎಂದಿದ್ದಾನೆ.
ಕೊಹ್ಲಿ ಕಾಲಿಗೆ ಬಿದ್ದು ಬಂದಾಗಿನಿಂದ ಯುವಕನಿಗೆ ನಗರದಲ್ಲಿ ಫುಲ್ ಡಿಮ್ಯಾಂಡ್ ಬಂದಿದೆ. ಕೊಹ್ಲಿ ಅಭಿಮಾನಿ ಚಿನ್ನಾನನ್ನು ಭೇಟಿಯಾಗಿ ಜನ ಶುಭಾಶಯಗಳನ್ನ ಹೇಳುತ್ತಿದ್ದಾರೆ. ಘಟನೆಯನ್ನ ನೆನೆದು ಭಾವುಕನಾಗುವ ಚಿನ್ನಾ, ನಾನು ಕೊಹ್ಲಿ ಸರ್ ಆಶೀರ್ವಾದ ಪಡೆದಿದ್ದೀನಿ. ನನಗೆ ಹೊಡೆಯಬೇಡಿ ಎಂದು ಗಾರ್ಡ್‌ಗಳಿಗೆ ಕೊಹ್ಲಿ ಹೇಳಿದ್ರು. ನಾನು ನಿಮ್ಮ ಬಿಗ್ ಫ್ಯಾನ್ ಸರ್ ಎಂದೆ. ಕೊಹ್ಲಿ ಥ್ಯಾಂಕ್ಸ್ ಅಂದ್ರು ಅಂತ ಚಿನ್ನಾ ಖುಷಿಯಿಂದ ಹೇಳುತ್ತಾನೆ. ಇದನ್ನೂ ಓದಿ: IPL 2024: ತವರಿನಲ್ಲೇ ಆರ್‌ಸಿಬಿಗೆ ಹೀನಾಯ ಸೋಲು – ಲಕ್ನೋಗೆ 28 ರನ್‌ಗಳ ಸೂಪರ್ ಜಯ
ವಿರಾಟ್ ಕೊಹ್ಲಿಯನ್ನ ಭೇಟಿಯಾಗಬೇಕು ಅಂತಾ ಚಿಕ್ಕವನಿದ್ದಾಗಿನಿಂದ ಆಸೆ ಇತ್ತು. ಹಾಗಾಗಿ ಮೀಟ್ ಆಗಲೇಬೇಕು ಅಂತಾ ಆವತ್ತಿನ ಪಂದ್ಯಕ್ಕೆ ಹೋಗಿದ್ದೆ. ಕೊನೆಗೂ ಕೊಹ್ಲಿ ಅವರನ್ನು ಭೇಟಿ ಆದೆ. ಆರ್‌ಸಿಬಿ ಕಪ್ ಗೆದ್ದೇ ಗೆಲ್ಲುತ್ತೆ. ಈ ಬಾರಿಯಲ್ಲದಿದ್ದರೂ ಮುಂದಿನ ಬಾರಿಯಾದ್ರೂ ಕಪ್ ನಮ್ದೆ ಅಂತ ಚಿನ್ನಾ ಆರ್‌ಸಿಬಿ (RCB) ಹಾಗೂ ವಿರಾಟ್ ಕೊಹ್ಲಿ ಮೇಲಿನ ಅಭಿಮಾನ ವ್ಯಕ್ತಪಡಿಸಿದ್ದಾನೆ.