ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಕೊನೆಯ ದಿನವಾದ ಇಂದು ಟೀಂ ಇಂಡಿಯಾ ದಾಖಲೆಗಳ ಮೇಲೆ ದಾಖಲೆ ಮಾಡಿತು. ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಟೀಂ ಇಂಡಿಯಾ ಇದುವರೆಗೆ ಆಡಿದ 45 ಟೆಸ್ಟ್ ಗಳಲ್ಲಿ 26ನೇ ಗೆಲುವು ಸಾಧಿಸಿದೆ. ಈ ಮೂಲಕ ಧೋನಿ ನಂತರ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಿದ ಕ್ಯಾಪ್ಟನ್ ಎಂಬ ಕೀರ್ತಿಗೆ ಕೊಹ್ಲಿ ಭಾಜನರಾದರು.
ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಇದುವರೆಗೆ ಆಡಿದ 60 ಪಂದ್ಯಗಳಲ್ಲಿ 27 ಪಂದ್ಯಗಳನ್ನು ಗೆದ್ದಿತ್ತು. ಇನ್ನೊಂದು ಟೆಸ್ಟ್ ಗೆದ್ದರೆ ಈ ದಾಖಲೆ ಸರಿಸಮಾನವಾಗಲಿದ್ದು, 2 ಪಂದ್ಯ ಗೆದ್ದರೆ ಕೊಹ್ಲಿಯೇ ಅತಿ ಹೆಚ್ಚು ಟೆಸ್ಟ್ ಗೆದ್ದ ನಾಯಕನಾಗುತ್ತಾರೆ.
Advertisement
Advertisement
ಕೊಹ್ಲಿ ನೇತೃತ್ವದಲ್ಲಿ ವಿದೇಶದಲ್ಲಿ ಇದು ಟೀಂ ಇಂಡಿಯಾದ 11ನೇ ಗೆಲುವು. ಈ ಮೂಲಕ ಮಾಜಿ ಕಪ್ತಾನ ಸೌರವ್ ಗಂಗೂಲಿ ಮಾಡಿದ್ದ ಸಾಧನೆಯನ್ನು ಕೊಹ್ಲಿ ಸರಿಗಟ್ಟಿದರು. ಗಂಗೂಲಿ ಅವರ ನೇತೃತ್ವದಲ್ಲಿ ಕೂಡಾ ಟೀಂ ಇಂಡಿಯಾ ವಿದೇಶದಲ್ಲಿ 11 ಗೆಲುವು ಸಾಧಿಸಿತ್ತು. ಅಲ್ಲದೇ ತನ್ನ ವೃತ್ತಿ ಜೀವನದಲ್ಲಿ 49 ಟೆಸ್ಟ್‍ಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದ ಗಂಗೂಲಿ 21 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರು.
Advertisement
ಟಾಸ್ ಗೆದ್ದು ಪಂದ್ಯ ಸೋತಿಲ್ಲ ಕೊಹ್ಲಿ!: ಟೀಂ ಇಂಡಿಯಾ ನಾಯಕ ಕೊಹ್ಲಿ ಇದುವರೆಗೆ ಟಾಸ್ ಗೆದ್ದ ಯಾವುದೇ ಟೆಸ್ಟ್ ಪಂದ್ಯದಲ್ಲಿ ಸೋತಿಲ್ಲ ಎನ್ನುವುದೂ ವಿಶೇಷ. ಇದುವರೆಗೆ ಕೊಹ್ಲಿ 21 ಮ್ಯಾಚ್ ಗಳಲ್ಲಿ ಟಾಸ್ ಗೆದ್ದಿದ್ದಾರೆ. ಇದರಲ್ಲಿ 18 ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದರೆ, ಇನ್ನು ಮೂರು ಟೆಸ್ಟ್ ಪಂದ್ಯಗಳು ಡ್ರಾ ಆಗಿತ್ತು.
Advertisement
ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯ ಜನವರಿ 3ರಿಂದ ಸಿಡ್ನಿಯಲ್ಲಿ ಶುರುವಾಗಲಿದ್ದು ಈ ಪಂದ್ಯವನ್ನು ಗೆದ್ದರೆ ಎರಡು ದಾಖಲೆಗಳು ಕೊಹ್ಲಿ ಪಾಲಾಗಲಿದೆ. ಸಿಡ್ನಿ ಪಂದ್ಯ ಗೆದ್ದರೆ 27 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಇದಲ್ಲದೇ ತನ್ನ ನಾಯಕತ್ವದಲ್ಲಿ ವಿದೇಶಿ ನೆಲದಲ್ಲಿ 12ನೇ ಗೆಲುವು ಸಾಧಿಸುವ ಮೂಲಕ ವಿದೇಶಿ ಮಣ್ಣಿನಲ್ಲಿ ಅತಿ ಹೆಚ್ಚು ಗೆಲುವಿನ ಸಾಧನೆಯೂ ಕೊಹ್ಲಿ ಹೆಸರಿಗೆ ಬರುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv