ಕೋಲ್ಕತ್ತಾ: ರನ್ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ತಮ್ಮ ನಾಯಕತ್ವದಲ್ಲಿ ಸತತ ಏಳು ಟೆಸ್ಟ್ ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಜೊತೆಗೆ ಭಾರತ ತಂಡವು ಕೊಹ್ಲಿ ನೇತೃತ್ವದಲ್ಲಿ ಐತಿಹಾಸಿಕ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಭಾನುವಾರ ಕೋಲ್ಕತ್ತಾದಲ್ಲಿ ಆಡಿದ ಹಗಲು ರಾತ್ರಿ ಟೆಸ್ಟ್‌ನಲ್ಲಿ ಬಾಂಗ್ಲಾದೇಶವನ್ನು ಇನ್ನಿಂಗ್ಸ್ ಮತ್ತು 46 ರನ್‍ಗಳಿಂದ ಸೋಲಿಸಿತು. ಈ ಮೂಲಕ ವಿರಾಟ್ ನೇತೃತ್ವದಲ್ಲಿ ಭಾರತ ಸತತ ಏಳು ಟೆಸ್ಟ್ ಪಂದ್ಯಗಳನ್ನು ಗೆದ್ದುಗೊಂಡಿತು. ಎಂ.ಎಸ್.ಧೋನಿ ನಾಯಕತ್ವದಲ್ಲಿ ಭಾರತ 2013ರಲ್ಲಿ ಸತತ 6 ಟೆಸ್ಟ್ ಪಂದ್ಯಗಳನ್ನು ಗೆದ್ದಿತ್ತು. ಹಗಲು-ರಾತ್ರಿ ಟೆಸ್ಟ್‌ನಲ್ಲಿ ಕೊಹ್ಲಿ ತಮ್ಮ ಮೊದಲ ಶತಕವನ್ನು ಗಳಿಸಿದರು. ಈ ಪಂದ್ಯದಲ್ಲಿ ಅವರು 136 ರನ್ ಗಳಿಸಿದರು.
Advertisement
Advertisement
ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಮೂರು ಸ್ವರೂಪಗಳಲ್ಲಿ (ಟೆಸ್ಟ್, ಏಕದಿನ ಮತ್ತು ಟಿ 20) ನಾಯಕನಾಗಿ ಶತಕ ಗಳಿಸಿದ ಸಾಧನೆಯಲ್ಲಿ ಕೊಹ್ಲಿ ಸಮನಾದರು. ಎಲ್ಲಾ ಮೂರು ಸ್ವರೂಪಗಳ 160 ಪಂದ್ಯಗಳಲ್ಲಿ ಕೊಹ್ಲಿ 41 ಶತಕಗಳನ್ನು ಸಿಡಿಸಿದ್ದಾರೆ. ರಿಕಿ ಪಾಂಟಿಂಗ್ 324 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಕೊಹ್ಲಿ ನಂತರ ಸೌರವ್ ಗಂಗೂಲಿ 16 ರನ್ ಮತ್ತು ಸಚಿನ್ ತೆಂಡೂಲ್ಕರ್ 13 ಶತಕಗಳನ್ನು ಬಾರಿಸಿದ್ದಾರೆ.
Advertisement
ಕೊಹ್ಲಿ ಪಡೆ ವೆಸ್ಟ್ ಇಂಡೀಸ್ ವಿರುದ್ಧ ಆಂಟಿಗಾದಲ್ಲಿ ಟೆಸ್ಟ್ ಪಂದ್ಯದಲ್ಲಿ 318 ರನ್‍ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು. ಈ ಮೂಲಕ ಗೆಲುವಿನ ಖಾತೆ ತೆರೆದ ಟೀಂ ಇಂಡಿಯಾ ನಂತರ ಕಿಂಗ್‌ಸ್ಟನ್ ನಲ್ಲಿ ನಡೆದ ಪಂದ್ಯದಲ್ಲಿ 257 ರನ್‍ಗಳಿಂದ ಜಯಗಳಿಸಿತ್ತು. ಭಾರತ ಪ್ರವಾಸ ಕೈಗೊಂಡಿದ್ದ ದಕ್ಷಿಣ ಆಫ್ರಿಕಾ ತಂಡದ ವಿರುದ್ಧವೂ ಕೊಹ್ಲಿ ಟೆಸ್ಟ್ ಸರಣಿ ಗೆದ್ದು ಬೀಗಿತ್ತು. ಈ ವೇಳೆ ವಿಶಾಖಪಟ್ಟಣಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ 203 ರನ್‍ಗಳಿಂದ ಗೆದ್ದಿತ್ತು. ಪುಣೆಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 137 ರನ್ ಹಾಗೂ ರಾಚಿಯಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 202 ರನ್‍ಗಳಿಂದ ಭಾರತ ತಂಡವು ಗೆದ್ದಿತ್ತು.
Advertisement
ಬಾಂಗ್ಲಾದೇಶದ ವಿರುದ್ಧ ಇಂದೋರ್ ಹಾಗೂ ಕೋಲ್ಕತ್ತಾದಲ್ಲಿ ನಡೆದ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ನಿಂದ ಗೆದ್ದು ಕೊಂಡಿದೆ. ಮೊದಲ ಪಂದ್ಯದಲ್ಲಿ 130 ರನ್ ಹಾಗೂ ಎರಡನೇ ಪಂದ್ಯದಲ್ಲಿ 46 ರನ್‍ಗಳಿಂದ ಭಾರತ ಗೆಲವು ಸಾಧಿಸಿತು. ಈ ಮೂಲಕ ಕೊಹ್ಲಿ ನೇತೃತ್ವದಲ್ಲಿ ಟೀಂ ಇಂಡಿಯಾ ಏಳು ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಜೊತೆಗೆ ನಾಲ್ಕು ಪಂದ್ಯಗಳನ್ನು ಇನ್ನಿಂಗ್ಸ್ ನಿಂದ ಜಯಗಳಿಸಿ ಐತಿಹಾಸಿಕ ದಾಖಲೆ ಬರೆದಿದೆ.
India's last 4 Tests:
v SA, Pune – Inns & 137 runs
v SA, Ranchi – Inns & 202 runs
v Ban, Indore – Inns & 130 runs
v Ban, Kolkata – Inns & 46 runs#IndvBan
— Bharath Seervi (@SeerviBharath) November 24, 2019
ವಿರಾಟ್ ಹೆಚ್ಚು ಟೆಸ್ಟ್ ಗೆದ್ದ ಐದನೇ ನಾಯಕ:
ಆಸ್ಟ್ರೇಲಿಯಾದ ಎಲ್ಲೆನ್ ಬಾರ್ಡರ್ ಅವರನ್ನು ಹಿಂದಿಕ್ಕಿ ಕೊಹ್ಲಿ ವಿಶ್ವದ ಐದನೇ ಅತ್ಯಂತ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಭಾರತವು 53 ಟೆಸ್ಟ್ ಪಂದ್ಯಗಳಲ್ಲಿ 33 ಪಂದ್ಯಗಳನ್ನು ಗೆದ್ದಿದೆ. ಬಾರ್ಡರ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ 93 ಟೆಸ್ಟ್ ಪಂದ್ಯಗಳಲ್ಲಿ 32 ಗೆದ್ದಿತ್ತು. ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ 53 ಟೆಸ್ಟ್ ಗೆದ್ದು, ಅಗ್ರಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 48 ಪಂದ್ಯ ಜಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಸ್ಟೀವ್ ವಾ ಇದ್ದಾರೆ. ಅವರ ನಾಯಕತ್ವದಲ್ಲಿ 41 ಪಂದ್ಯಗಳನ್ನು ಗೆದ್ದಿದ್ದಾರೆ. ವೆಸ್ಟ್ ಇಂಡೀಸ್‍ನ ಕ್ಲೈವ್ ಲಾಯ್ಡ್ ನಾಯಕನಾಗಿ 36 ಪಂದ್ಯಗಳನ್ನು ಗೆದ್ದಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಈವರೆಗಿನ ಎಲ್ಲಾ 7 ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ 360 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾ 116 ಅಂಕಗಳೊಂದಿಗೆ, ನ್ಯೂಜಿಲೆಂಡ್ 60 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.