ಚೆನ್ನೈ: ಫೆಂಗಲ್ ಚಂಡಮಾರುತದಿಂದ (Cyclone Fengal) ಚೆನ್ನೈನಲ್ಲಿ (Chennai) ಆಗುತ್ತಿರುವ ಭಾರೀ ಮಳೆ (Rain) ಹಾಗೂ ಗಾಳಿಯಿಂದಾಗಿ ಅಲ್ಲಿನ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ವಿಮಾನವೊಂದು ಹೆಣಗಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶನಿವಾರ ಸಂಜೆ ಭಾರೀ ಮಳೆ ಮತ್ತು ಬಲವಾದ ಗಾಳಿಯ ನಡುವೆ ಮುಂಬೈ – ಚೆನ್ನೈ ನಡುವೆ ಸಂಚರಿಸುವ ಇಂಡಿಗೋ ವಿಮಾನವನ್ನು (IndiGo Flight) ಚೆನ್ನೈ ಏರ್‌ಪೋರ್ಟ್‌ನಲ್ಲಿ ಇಳಿಸಲು ಪೈಲಟ್ ಯತ್ನಿಸಿದ್ದಾರೆ. ಆದರೆ ಕೊನೆಯ ಕ್ಷಣದಲ್ಲಿ ಟಚ್‌ಡೌನ್‌ನ್ನು ಸ್ಥಗಿತಗೊಳಿಸಿ ಮತ್ತೆ ವಿಮಾನವನ್ನು ಹಾರಿಸಲಾಗಿದೆ. ಇಂಡಿಗೋ ವಿಮಾನಯಾನ ಸಂಸ್ಥೆ ಈ ಘಟನೆಯನ್ನು ದೃಢಪಡಿಸಿದೆ.
ವಿಮಾನವನ್ನು ಇಳಿಸಲು ಸಾಧ್ಯವಾಗದೆ ಇರುವ ಸಂದರ್ಭದಲ್ಲಿ ಮತ್ತೆ ಹಾರಿಸುವ ಪ್ರಕ್ರಿಯೆಗೆ ಗೋ-ರೌಂಡ್ ಎನ್ನಲಾಗತ್ತದೆ. ಇದನ್ನು ಸಾಮಾನ್ಯವಾಗಿ ಸುರಕ್ಷಿತ ಲ್ಯಾಂಡಿಂಗ್ ಸಾಧಿಸಲು ಸಾಧ್ಯವಾಗದಿದ್ದಾಗ ಮಾಡಲಾಗುತ್ತದೆ.
ಇಂತಹ ಕೌಶಲ್ಯವನ್ನು ಪೈಲಟ್‌ಗಳು ತುರ್ತು ಸಂದರ್ಭಗಳನ್ನು ನಿಭಾಯಿಸಲು ಸೂಕ್ತ ತರಬೇತಿ ಪಡೆದಿದ್ದಾರೆ ಎಂದು ಏರ್‌ಲೈನ್ಸ್ ಸ್ಪಷ್ಟಪಡಿಸಿದೆ.
ಫೆಂಗಲ್ ಚಂಡಮಾರುತದಿಂದ ಉತ್ತರ ತಮಿಳುನಾಡು ಮತ್ತು ಪುದುಚೇರಿಯ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಚೆನ್ನೈನಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದಾರೆ.