ಮಡಿಕೇರಿ: ಭಾರೀ ಮಳೆ ಹಿನ್ನಲೆ ಮಡಿಕೇರಿಯಲ್ಲಿ ಬೆಟ್ಟ, ಗುಡ್ಡ ಕುಸಿತ ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಮತ್ತೆ ಎರಡು ಬೆಟ್ಟಗಳು ಕುಸಿಯುವ ಆತಂಕ ಎದುರಾಗಿದೆ.
ಭಾರೀ ಮಳೆ ಹಿನ್ನೆಲೆ ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಟ್ಟ, ಗುಡ್ಡ ಕುಸಿಯುವ ಸಂಭವಿಸಿದ್ದು ಸಾರ್ವಜನಿಕರು ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಸೂಚಿಸಿದ ಬೆನ್ನಲ್ಲೇ ಸಾರ್ವಜನಿಕರಲ್ಲಿ ಭಯ ಶುರುವಾಗಿದೆ.
ವಿರಾಜಪೇಟೆ ನಗರದ ನೆಹರು ನಗರ ಬೆಟ್ಟ ಮತ್ತು ಅಯ್ಯಪ್ಪ ಬೆಟ್ಟ ಕುಸಿಯುವ ಭೀತಿಯಲ್ಲಿವೆ. ನೆಹರು ನಗರದಲ್ಲಿ ಬೆಟ್ಟ ಸಂಪೂರ್ಣ ಬಾಯ್ತೆರಿದಿದ್ದು, ಬೆಟ್ಟದ ಬಿರುಕು ಕ್ಷಣ ಕ್ಷಣಕ್ಕೂ ಅಗಲವಾಗುತ್ತಿದೆ. ಅಲ್ಲದೆ, ಅಯ್ಯಪ್ಪ ಬೆಟ್ಟದಲ್ಲಿ ಸಹ ದೊಡ್ಡ ಬಿರುಕುಗಳು ಕಾಣಿಸಿಕೊಂಡಿದ್ದು, ಯಾವುದೇ ಕ್ಷಣದಲ್ಲೂ ಬೆಟ್ಟ ಕುಸಿಯಬಹುದು ಎಂದು ಹೇಳಲಾಗುತ್ತಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ನೆಹರು ಬೆಟ್ಟದ 8 ಕುಟುಂಬಗಳನ್ನು ಹಾಗೂ ಅಯ್ಯಪ್ಪ ಬೆಟ್ಟದ ಬಳಿಯ 25 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಈ ಎಲ್ಲ ಕುಟುಂಬಗಳಿಗೆ ವಿರಾಜಪೇಟೆಯ ಸರ್ಕಾರಿ ಶಾಲೆಯಲ್ಲಿ ಆಶ್ರಯ ಕಲ್ಪಿಸಲಾಗಿದೆ. ಸ್ಥಳಾಂತರಿಸಿದರೂ ಸಹ ಯಾವ ಪ್ರಮಾಣದಲ್ಲಿ ಗುಡ್ಡ ಕುಸಿಯಲಿದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ವಿರಾಜಪೇಟೆ ನಗರದ ಜನತೆ ತೀವ್ರ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.
ಈಗಾಗಲೇ ಮಲೆನಾಡು, ಕರಾವಳಿ ಭಾಗದ 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಈಗಾಗಲೇ ರೆಡ್ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಕರ್ನಾಟಕ ಮೂರು ಜಿಲ್ಲೆಗಳು ಸೇರಿದಂತೆ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಹಾವೇರಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೊಡಗು ಜಿಲ್ಲೆಯಲ್ಲಿ ಸಹ ನಾಳೆ ಬೆಳಗ್ಗೆಯವರೆಗೆ ರೆಡ್ ಅಲರ್ಟ್, ಗುರುವಾರ ಹಾಗೂ ಶುಕ್ರವಾರ ಆರೆಂಜ್ ಅಲರ್ಟ್ ಘೋಷಣೆ ಮಾಡಿ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಆದೇಶ ಹೊರಡಿಸಿದ್ದಾರೆ. ಕೇಂದ್ರ ಹವಾಮಾನ ಇಲಾಖೆ ಮಾಹಿತಿ ಆಧರಿಸಿ ಈ ನಿರ್ಧಾರ ಕೈಗೊಂಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಇಂದು ರಾತ್ರಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಅತಿಯಾದ ಮಳೆಯಿಂದ ಬ್ರಹ್ಮಗಿರಿ ಬೆಟ್ಟ ಸೇರಿದಂತೆ ಹಲವು ಬೆಟ್ಟಗಳು ಕುಸಿಯುವ ಭೀತಿ ಎದುರಾಗಿದೆ. ಹೀಗಾಗಿ ಬೆಟ್ಟ, ಗುಡ್ಡ ಪ್ರದೇಶಗಳಲ್ಲಿ ಇಂದು ಹಾಗೂ ನಾಳೆ ಬೆಳಿಗ್ಗೆ ಭೂ ಕುಸಿತ ಉಂಟಾಗುವ ಸಂಭವ ಇದೆ. ಗುಡ್ಡಗಾಡು ಪ್ರದೇಶ, ಮತ್ತು ಬೆಟ್ಟದ ತಪ್ಪಲುಗಳಲ್ಲಿ ವಾಸ ಮಾಡುವ ಜನರು ಜಾಗೃತೆಯಿಂದ ಇರಿ, ಇಲ್ಲವೇ ಸ್ಥಳಾಂತರವಾಗಿ ಎಂದು ಜಿಲ್ಲಾಡಳಿತ ಮನವಿ ಮಾಡಿದೆ.