– ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳು ಶಾಮೀಲಾಗಿದ್ದರೆ ಅವರನ್ನೂ ಅಮಾನತು ಮಾಡ್ತೀವಿ
ಬೆಳಗಾವಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ (Parappana Agrahara Jail) ನಟ ದರ್ಶನ್‍ಗೆ (Darshan) ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ 7 ಅಧಿಕಾರಿಗಳನ್ನ ಈಗಾಗಲೇ ಅಮಾನತು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ.
ನಗರದಲ್ಲಿ (Belagavi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ದರ್ಶನ್ ಪರವೂ ಇಲ್ಲ, ವಿರುದ್ಧವೂ ಇಲ್ಲ. ಜೈಲಿನ ಒಳಗೆ ದರ್ಶನ್ ಮತ್ತು ಇನ್ನಿತರರಿಗೆ ರಾಜಾತಿಥ್ಯ ನೀಡುತ್ತಿರುವ ಘಟನೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಕರ್ತವ್ಯಲೋಪವಾಗಿದೆ. ಈಗಾಗಲೇ ಸಂಬಂಧಪಟ್ಟ 7 ಮಂದಿಯನ್ನು ಅಮಾನತು ಮಾಡಲಾಗಿದೆ. ಇನ್ನೂ ಕೆಲವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇದು ಅಧಿಕಾರಿಗಳ ಮಟ್ಟದಲ್ಲಿ ನಡೆದಿರುವ ಲೋಪ ಎಂದು ಅವರು ಹೇಳಿದ್ದಾರೆ.
ನಾವು ದರ್ಶನ್ ಪರವೂ ಇಲ್ಲ, ವಿರುದ್ಧವೂ ಇಲ್ಲ. ಜೈಲಿನ ಒಳಗೆ ದರ್ಶನ್ ಮತ್ತು ಇನ್ನಿತರರಿಗೆ ರಾಜಾತಿಥ್ಯ ನೀಡುತ್ತಿರುವ ಘಟನೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಕರ್ತವ್ಯಲೋಪವಾಗಿದೆ. ಈ ವರೆಗೆ 7 ಜನರನ್ನು ಅಮಾನತು ಮಾಡಲಾಗಿದೆ, ಈ ಬಗ್ಗೆ ತನಿಖೆಯನ್ನೂ ಮಾಡಿಸಿ, ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳು ಷಾಮೀಲಾಗಿದ್ದರೆ ಅವರನ್ನೂ ಅಮಾನತು… pic.twitter.com/nLN18otbI1
— Siddaramaiah (@siddaramaiah) August 26, 2024
ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಗೃಹ ಸಚಿವರಿಗೆ ಸೂಚಿಸಿದ್ದೇನೆ. ಅವರ ವರದಿ ಆಧಾರದಲ್ಲಿ ಸೂಕ್ತ ಕ್ರಮ ಜರುಗಿಸಲಾಗುತ್ತದೆ. ದರ್ಶನ್‍ನನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡಬೇಕಾ? ಬೇಡವೇ? ಎಂಬ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಹೇಳಿಕೆಯೊಂದರ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ನಾವು ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ಜನರ ಪರ ಇರುವುದನ್ನು ಸಾಬೀತುಪಡಿಸಿದ್ದೇವೆ. ಈ ಕುರಿತು ಜೋಷಿಯವರಿಗೆ ನಮ್ಮನ್ನು ಪ್ರಶ್ನಿಸುವ ಯಾವುದೇ ನೈತಿಕತೆ ಇಲ್ಲ ಎಂದು ಕುಟುಕಿದರು.
ಬೆಳಗಾವಿ ಜಿಲ್ಲೆ ದೊಡ್ಡ ಜಿಲ್ಲೆಯಾಗಿದ್ದು, ಅದನ್ನು ವಿಭಜನೆ ಮಾಡುವ ಕುರಿತು ಶಾಸಕರ ಜತೆ ಮಾತುಕತೆ ನಡೆಸಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.