ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B. Y. Vijayendra) ಆಗ್ರಹಿಸಿದ್ದಾರೆ.
ಜೈಲಿನಲ್ಲಿ( Parappana Agrahara Jail) ಕೈದಿಗಳಿಗೆ ರಾಜಾತಿಥ್ಯವನ್ನು ಖಂಡಿಸಿ ಯುವ ಮೋರ್ಚಾ (Bharatiya Janata Yuva Morcha) ವತಿಯಿಂದ ಹಮ್ಮಿಕೊಂಡಿದ್ದ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಪ್ರತಿಭಟನೆಯಲ್ಲಿ ಅವರು ಭಾಗವಹಿಸಿದ್ದರು. ಬಳಿಕ ಮಾತನಾಡಿದ ಅವರು, ಪರಪ್ಪನ ಅಗ್ರಹಾರ ಜೈಲು ಒಂದು ರೀತಿ ನೈಟ್ ಕ್ಲಬ್ ಆಗಿ, ಮನರಂಜನಾ ಕ್ಲಬ್ ಆಗಿ ಪರಿವರ್ತನೆಗೊಂಡಿದೆ. ಭಯೋತ್ಪಾದಕರು, ಐಎಸ್‍ಐ ಏಜೆಂಟರು, ಮುಸ್ಲಿಂ ಮೂಲಭೂತವಾದಿಗಳು- ಇವರೆಲ್ಲರಿಗೂ ಪರಪ್ಪನ ಅಗ್ರಹಾರ ಜೈಲು ಮನರಂಜನಾ ಕ್ಲಬ್ ಆಗಿದೆ. ಇಂಥ ದೇಶದ್ರೋಹಿಗಳಿಗೆ ಟಿವಿ., ಮೊಬೈಲ್ ಫೋನ್, ಗುಂಡು- ತುಂಡುಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಎಲ್ಲವೂ ಬಹಳ ಸರಾಗವಾಗಿ ನಡೆಯುತ್ತಿದೆ ಎಂದು ಆಕ್ಷೇಪಿಸಿದರು.
ರಾಜ್ಯ ಸರಕಾರವು ಕಣ್ಮುಚ್ಚಿ ಕುಳಿತಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಈ ಕಾಂಗ್ರೆಸ್ ಸರಕಾರದ ಕುಮ್ಮಕ್ಕಿನಿಂದಲೇ ದೇಶದ್ರೋಹಿಗಳಿಗೆ ಐಷಾರಾಮಿ ವ್ಯವಸ್ಥೆಗಳನ್ನು ಪರಪ್ಪನ ಅಗ್ರಹಾರ ಜೈಲಲ್ಲಿ ಮಾಡಲಾಗಿದೆ. ಪತ್ರಿಕೆಗಳಲ್ಲಿ- ದೃಶ್ಯ ಮಾಧ್ಯಮಗಳಲ್ಲಿ ಮಾಹಿತಿ ಬಂದ ನಂತರ ಪರಪ್ಪನ ಅಗ್ರಹಾರ ಜೈಲಿನ ಮೇಲೆ ನಿನ್ನೆ ದಾಳಿ ಮಾಡಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಅದೇರೀತಿ ಜೈಲಿನ ವ್ಯವಸ್ಥೆಯೂ ಭ್ರಷ್ಟಾಚಾರದಲ್ಲೇ ಮುಳುಗಿಹೋಗಿದೆ. ಕಾಂಗ್ರೆಸ್ ಸರಕಾರದ ಕುಮ್ಮಕ್ಕು ಇಲ್ಲದಿದ್ದರೆ ಈ ರೀತಿ ಜೈಲಿನಲ್ಲಿ ವ್ಯವಸ್ಥೆ ಆಗಲು ಸಾಧ್ಯವಿಲ್ಲ. ಇಸ್ಲಾಮಿನ ಮೂಲಭೂತವಾದಿಗಳಿಗೆ ಈ ರೀತಿ ಮಾಡಿದ್ದು ದೇಶದ್ರೋಹದ ಕೆಲಸ ಎಂದು ಆರೋಪಿಸಿದರು.
ಇದಕ್ಕೆ ರಾಜ್ಯದ ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ನೇರ ಹೊಣೆಗಾರರು. ಸುಮ್ಮನೆ ನಾಟಕ ಮಾಡಿ ತಿಪ್ಪೆ ಸಾರಿಸುವ ಕೆಲಸ ಮಾಡಬಾರದು ಎಂದು ಒತ್ತಾಯಿಸಿದರು. ನಮ್ಮ ಪ್ರಜಾಪ್ರಭುತ್ವ ಅಪಾಯದಲ್ಲಿದೆ; ಕಗ್ಗೊಲೆ ಆಗುತ್ತಿದೆ ಎಂದು ರಾಜೀವ್ ಗಾಂಧಿಯವರು ಹೊರದೇಶಕ್ಕೆ ಹೋದಾಗ ಭಾಷಣ ಮಾಡಿ ಅಪಮಾನ ಮಾಡುತ್ತಾರೆ. ಅದರ ಭಾಗವಾಗಿ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ಹಾಗೂ ದೇಶದ್ರೋಹಿಗಳಿಗೆ ಐಷಾರಾಮಿ ವ್ಯವಸ್ಥೆಯನ್ನು ಸಿದ್ದರಾಮಯ್ಯರ ಸರಕಾರವು ಜೈಲಿನಲ್ಲೇ ಕಲ್ಪಿಸಿದಂತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಏರ್‌ಪೋರ್ಟ್‌ಗಳಲ್ಲಿ ಬೇರೆ ಧರ್ಮದವರಿಗೆ ಪ್ರಾರ್ಥನೆ ಮಾಡಲು ಪ್ರತ್ಯೇಕ ಕೊಠಡಿ ಕೊಡಬೇಕು – ಹೆಚ್‌ಡಿಕೆ
ಪೊಲೀಸ್ ಠಾಣೆ ಕಾಂಗ್ರೆಸ್ ಕಚೇರಿ
ವಿಪಕ್ಷ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಪರಮೇಶ್ವರ್ ಅವರ ಹಾಟ್‍ಲೈನ್ ಮೂಲಕ ಈ ಜೈಲಿನಿಂದ ಪಾಕಿಸ್ತಾನ, ಅಪಘಾನಿಸ್ತಾನಕ್ಕೆ ಕರೆಗಳು ಹೋಗುತ್ತಿವೆ. ಇವರು 2 ವರ್ಷದಿಂದ ಕತ್ತೆ ಕಾಯುತ್ತಿದ್ದಾರಾ ಎಂದು ಪ್ರಶ್ನಿಸಿದರು. ಗುಪ್ತಚರ ವಿಭಾಗ ಎರಡು ವರ್ಷದಿಂದ ಸತ್ತು ಹೋಗಿದೆಯೇ ಎಂದು ಕೇಳಿದರು. ಪೊಲೀಸ್ ಠಾಣೆಗಳನ್ನು ಇವರು ಕಾಂಗ್ರೆಸ್ ಕಚೇರಿ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಜೈಲಿನಲ್ಲೇ ಸೌಲಭ್ಯ ನೀಡುವ ಸರ್ಕಾರ
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಭಯೋತ್ಪಾದಕರಿಗೆ ಜೈಲಿನಲ್ಲೇ ಎಲ್ಲ ಅವಶ್ಯ ಸೌಲಭ್ಯ ನೀಡುವ ತೀರ್ಮಾನಕ್ಕೆ ರಾಜ್ಯದ ಕಾಂಗ್ರೆಸ್ ಸರಕಾರ ಬಂದ ಹಾಗಿದೆ ಎಂದು ದೂರಿದರು.
ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಶಾಸಕರಾದ ಕೆ. ಗೋಪಾಲಯ್ಯ, ಉದಯ್ ಬಿ. ಗರುಡಾಚಾರ್, ಎಂ. ಕೃಷ್ಣಪ್ಪ, ಸಿ. ಮುನಿರಾಜು, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು, ರಾಜ್ಯ ಕಾರ್ಯದರ್ಶಿಗಳಾದ ಹೆಚ್.ಸಿ. ತಮ್ಮೇಶ್ ಗೌಡ, ಶರಣು ತಳ್ಳಿಕೇರಿ, ಮುಖಂಡ ಉಮೇಶ್ ಶೆಟ್ಟಿ, ಜಿಲ್ಲಾಧ್ಯಕ್ಷರಾದ ಎಸ್. ಹರೀಶ್, ಸಪ್ತಗಿರಿ ಗೌಡ ಮತ್ತು ಪ್ರಮುಖರನ್ನು ಪೊಲೀಸರು ವಶಕ್ಕೆ ಪಡೆದರು.

