ಮಡಿಕೇರಿ: ವಿರಾಜಪೇಟೆ (Virajpete) ಗಣೇಶ ವಿಸರ್ಜನೋತ್ಸವ (Ganesh Immersion) ಸಂದರ್ಭದಲ್ಲಿ ಧ್ವನಿವರ್ಧಕಗಳಿಗೆ ಸಂಬಂಧಿಸಿದಂತೆ ನಿಯಮ ಉಲ್ಲಂಘಿಸಿದ ಆರೋಪದಡಿ ಒಟ್ಟು 64 ಮಂದಿ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಂಡಿದ್ದಾರೆ.
ಶ್ರೀಮಂಗಲ ಪೊಲೀಸ್ ಉಪನಿರೀಕ್ಷಕ ರವೀಂದ್ರ ಒಂದು ಮಂಟಪ ಸಮಿತಿ ವಿರುದ್ಧ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಇದನ್ನು ಒಟ್ಟು 16 ಸಮಿತಿಗಳ ಮಂಟಪಗಳಲ್ಲಿದ್ದ ಧ್ವನಿವರ್ಧಕಕ್ಕೆ ಸಂಬಂಧಿಸಿದ 64 ಮಂದಿಯ ವಿರುದ್ಧವೂ ಅನ್ವಯಿಸಿ ಕಲಂ 125, 285, 292, 36, 109 ಸೇರಿದಂತೆ ಕೆಪಿ ಕಾಯಿದೆ, 188 ಐಎಂವಿ ಕಾಯಿದೆಯಡಿಯೂ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಕಲ್ಲು – ನಾಳೆ ಬೆಳಗ್ಗೆಯವರೆಗೆ ಮದ್ದೂರಿನಲ್ಲಿ ನಿಷೇಧಾಜ್ಞೆ ಜಾರಿ
ಶಿವಕೇರಿಯ ಮಂಟಪದ ಮೆರವಣಿಗೆ ವೇಳೆ ದೊಡ್ಡ ಪ್ರಮಾಣದ ಧ್ವನಿವರ್ಧಕಗಳನ್ನು ವಾಹನದಲ್ಲಿಟ್ಟುಕೊಂಡು ತೆರಳುತ್ತಿದ್ದರು. ರಾತ್ರಿ 10ಗಂಟೆ ನಂತರ ಧ್ವನಿರ್ವಕ ಬಳಸದಂತೆ ಆಪರೇಟರ್‌ಗಳಿಗೆ ಸೂಚಿಸಿದರೂ ಇದನ್ನು ಪಾಲಿಸದೆ ಧ್ವನಿವರ್ದಕ ಬಳಕೆ ಮಾಡಲಾಗಿದೆ. ಕಾನೂನು ಉಲ್ಲಂಘನೆ ಮಾಡಿದ ಹಿನ್ನೆಲೆ ಡಿಜೆ ಆಪರೇಟರ್, ಮಾಲೀಕ ಮದನ್ ಕೃಷ್ಣ, ಟೆಕ್ನೀಷಿಯನ್‌ಗಳಾದ ಪುನೀತ್, ಮೋಕ್ಷಿತ್ ವಿರುದ್ಧ ಕ್ರಮಕೈಗೊಳ್ಳುವಂತೆ ವಿರಾಜಪೇಟೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರನ್ವಯ ಪ್ರಕರಣ ದಾಖಲಾಗಿ, ಒಟ್ಟು 16 ಸಮಿತಿಗಳ ಮಂಟಪದಲ್ಲಿದ್ದ ಧ್ವನಿವರ್ಧಕ ಸಂಬಂಧಿತ ವ್ಯಕ್ತಿಗಳನ್ನು ಆರೋಪಿಗಳನ್ನಾಗಿಸಿ ಪ್ರಕರಣ ದಾಖಲಿಸಲಾಗಿದೆ.
ಶಿವಕೇರಿಯ ವಿನಾಯಕ ಯುವ ಸಮಿತಿ, ಪಂಜರಪೇಟೆಯ ವಿನಾಯಕ ಸೇವಾ ಸಮಿತಿ, ಅರಸುನಗರದ ವಿಘ್ನೇಶ್ವರ ಸೇವಾ ಸಮಿತಿ, ಮೀನುಪೇಟೆಯ ವಿಶ್ವ ವಿನಾಯಕ ಉತ್ಸವ ಸಮಿತಿ, ದಖನ್ನಿ ಮೊಹಲ್ಲದ ವಿಜಯ ವಿನಾಯಕ ಉತ್ಸವ ಸಮಿತಿ, ಪಟ್ಟಣ ಪಂಚಾಯಿತಿ ವಿಘ್ನೇಶ್ವರ ಉತ್ಸವ ಸಮಿತಿ, ಕೆ. ಬೋಯಿಕೇರಿಯ ಕೆಂಕೇರಮ್ಮ ವಿಘ್ನೇಶ್ವರ ಸಮಿತಿ, ಪಂಜರಪೇಟೆಯ ಮಹಾಗಣಪತಿ ಸೇವಾ ಸಮಿತಿ, ಸುಂಕದಕಟ್ಟೆಯ ವರಸಿದ್ಧಿ ವಿನಾಯಕ ಉತ್ಸವ ಸಮಿತಿ, ನೆಹರುನಗರದ ನೇತಾಜಿ ಉತ್ಸವ ಸಮಿತಿ, ಮಲೆತಿರಿಕೆ ಬೆಟ್ಟದ ಕಣ್ಮಣಿ ವಿನಾಯಕ ಉತ್ಸವ ಸಮಿತಿ, ತೆಲುಗರ ಬೀದಿಯ ವಿನಾಯಕ ಭಕ್ತ ಮಂಡಳಿ, ಅಯ್ಯಪ್ಪ ಬೆಟ್ಟದ ವರದ ವಿನಾಯಕ ಸೇವಾ ಸಮಿತಿ, ಸುಣ್ಣದ ಬೀದಿಯ ದೊಡ್ಡಮ್ಮ, ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ, ಗೌರಿಕೆರೆ ಗಣೇಶೋತ್ಸವ ಸಮಿತಿಯ ಮಂಟಪಗಳಲ್ಲಿದ್ದ ಡಿಜೆ ಮಾಲೀಕ, ಆಪರೇಟರ್, ಟೆಕ್ನೀಷಿಯನ್ ಹಾಗೂ ವಾಹನ ಚಾಲಕರ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ.
ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಬಂದ ನಂತರ ಪರಿಸರ ಕಾಯಿದೆಯ ಸೆಕ್ಷನ್ 15, ಕಾಯಿದೆ 1986 ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ.ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ – ಮದ್ದೂರು ಉದ್ವಿಗ್ನ