ಹಾಸನ: ಸ್ಥಳೀಯ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಆಮಿಷ ಒಡ್ಡಿ ಹಾಗೂ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ನೀಡಿದ್ದ ಆರೋಪದಡಿ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ನಗರದ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ನಗರಸಭೆ 8ನೇ ವಾರ್ಡ್ ನಲ್ಲಿ ಬಿಜೆಪಿ ಕಾರ್ಯಕರ್ತರು ಮತದಾರರಿಗೆ ಮದ್ಯ ಹಂಚುತ್ತಿದ್ದಾರೆ ಎನ್ನುವ ವಿಚಾರ ತಿಳಿದು ಪೊಲೀಸರು ಸ್ಥಳಕ್ಕೆ ತೆರಳಿ ಅಲ್ಲಿದ್ದ ಮೂರು ಮಂದಿಯನ್ನು ಬಂಧಿಸಿ ಠಾಣೆಗೆ ಕರೆ ತಂದಿದ್ದರು. ಈ ವೇಳೆ ವಿಷಯ ತಿಳಿದು ಪ್ರೀತಂ ಗೌಡ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ನಿಂದನೆ ಮಾಡಿದ್ದಾರೆ. ಬಳಿಕ ಪೊಲೀಸರು ಬಂಧಿಸಿದ್ದ ಆರೋಪಿಗಳನ್ನ ಠಾಣೆಗೆ ನುಗ್ಗಿ ಹೊರ ಕರೆತರಲು ಯತ್ನಿಸಿದ್ದು, ಶಾಸಕನನ್ನು ಸೇರಿ 20 ಮಂದಿ ಬೆಂಬಗಲಿಗರು ಅಸಭ್ಯ ವರ್ತಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
Advertisement
ಈ ಘಟನೆ ಕುರಿತು ಸಿಪಿಐ ಸತ್ಯನಾರಾಯಣ ನೀಡಿದ ದೂರಿನಡಿ ಶಾಸಕ ಪ್ರೀತಂ ಗೌಡ ವಿರುದ್ಧ ಐಪಿಸಿ ಸೆಕ್ಷನ್ 143, 353, 225ರ ಅಡಿ ಪ್ರಕರಣ ದಾಖಲಿಸಲಾಗಿದೆ.
Advertisement
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಪ್ರೀತಂ ಗೌಡ, ರಾಜಕೀಯ ದುರುದ್ದೇಶದಿಂದ ನನ್ನ ಮೇಲೆ ಜೆಡಿಎಸ್ ನವರು ಎಫ್‍ಐಆರ್ ದಾಖಲು ಮಾಡಿಸಿದ್ದಾರೆ. ನನ್ನ ಗೆಲುವನ್ನು ಸಹಿಸಿಕೊಳ್ಳಲು ಅವರಿಗೆ ಇನ್ನೂ ಸಾಧ್ಯವಾಗುತ್ತಿಲ್ಲ. ನಗರಸಭೆಯ 8ನೇ ವಾರ್ಡ್ ನಲ್ಲಿ ಕಳೆದ ರಾತ್ರಿ ಯಾವುದೇ ರೀತಿಯ ಸಂಘರ್ಷ ನಡೆದಿಲ್ಲ. ನಾನು ಯಾವುದೇ ರೀತಿಯ ಗೂಂಡಾ ವರ್ತನೆ ತೋರಿಲ್ಲ. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿಲ್ಲ. ಆದರೂ ರಾಜಕೀಯವಾಗಿ ನನ್ನನ್ನು ತುಳಿಯುವ ಹುನ್ನಾರದಿಂದ ಎಫ್‍ಐಆರ್ ದಾಖಲಾಗಿದೆ ಎಂದರು.
Advertisement
Advertisement
ಇದರಿಂದ ನಾನು ಹೆದರಿಕೊಂಡು ಹೋಗೋದಿಲ್ಲ. ಇದನ್ನು ಎದುರಿಸುವ ಶಕ್ತಿ ನನಗಿದೆ. ನನ್ನ ಹಿಂದೆ ಬಿಜೆಪಿ ಪಕ್ಷ ಹಾಗೂ ಕಾರ್ಯಕರ್ತರಿದ್ದಾರೆ. ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಿ, ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಬಹಿರಂಗ ಪಡಿಸಬೇಕು. ರಾತ್ರಿ ನಡೆದ ಎಲ್ಲಾ ಅವಘಡಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ದಬ್ಬಾಳಿಕೆಗೆ ಹೆದರಿ ಓಡಿ ಹೋಗುವ ಜಾಯಮಾನ ನನ್ನದಲ್ಲ. ಈ ಮೂಲಕ ನನ್ನನ್ನು ಹತ್ತಿಕ್ಕಬಹುದು ಎಂದುಕೊಂಡಿರುವವರಿಗೆ ಭ್ರಮ ನಿರಸನವಾಗಲಿದೆ ಎಂದು ಉಸ್ತುವಾರಿ ಸಚಿವ ಹೆಚ್‍ಡಿ ರೇವಣ್ಣ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಐ ಸತ್ಯನಾರಾಯಣ ನೀಡಿದ ದೂರಿನಲ್ಲಿ ಏನಿದೆ?
ಆಗಸ್ಟ್ 29 ರಂದು ನನಗೆ ಹಾಸನ ನಗರ ಸಭೆ ಚುನಾವಣೆ ಪ್ರಯುಕ್ತ ಸೆಕ್ಟರ್ 1ಕ್ಕೆ ನನಗೆ ಮತ್ತು ನಮ್ಮ ಠಾಣಾ ಪಿಸಿ-371 ಚಿದಾನಂದ ರವರನ್ನು ನೇಮಕ ಮಾಡಿದ್ದರು. ಅದರಂತೆ ರಾತ್ರಿ 11ಕ್ಕೆ ನಾವು ಕರ್ತವ್ಯದಲ್ಲಿರುವಾಗ 8ನೇ ವಾರ್ಡ್‍ನಲ್ಲಿ ಮತದಾರರನ್ನು ಸೆಳೆಯಲು ಮದ್ಯವನ್ನು ಸುಜಲ ಕಾಲೇಜು ಹತ್ತಿರ ಹಂಚುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿತ್ತು. ಅಲ್ಲಿಗೆ ಹೋದಾಗ ಬಿಜೆಪಿ ಅಭ್ಯರ್ಥಿ ವೇಣು ಮತ್ತು ಇಬ್ಬರು ಕೈಯಲ್ಲಿ ಮದ್ಯದ ಬಾಟಲಿಗಳನ್ನು ಒಂದು ಬಟ್ಟೆಯ ಬ್ಯಾಗಿನಲ್ಲಿ ಹಿಡಿದುಕೊಂಡು ನಿಂತಿದ್ದರು. ಅಲ್ಲಿಯೇ ಮಾಹಿತಿ ನೀಡಿದ್ದ ಪ್ರವೀಣ್ ಮತ್ತು ಅವರ ಸ್ನೇಹಿತರು ನಿಂತಿದ್ದರು. ನಾನು ವೇಣು ರವರ ಬಳಿ ಇದ್ದ ಬ್ಯಾಗನ್ನು ಪಡೆದು ನೋಡಿದಾಗ ಅದರಲ್ಲಿ 8 ರಿಂದ 9 ಮ್ಯಾಕ್ ಡೆವೆಲ್ ಸಿಲ್ಮ್ ಬ್ರಾಂಡ್‍ನ ತಲಾ 180 ಎಂ ಎಲ್ ನ ಒಟ್ಟು 9 ಮದ್ಯದ ಬಾಟಲಿಗಳು ಇದ್ದವು. ಮತದಾರರನ್ನು ಸೆಳೆಯಲು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಮದ್ಯವನ್ನು ಹಂಚುತ್ತಿರುವುದು ಖಚಿತಗೊಂಡ ಮೇರೆಗೆ ವೇಣು ಮತ್ತು ಆತನ ಸ್ನೇಹಿತರಾದ 2 ಜನರನ್ನು ಮದ್ಯ ಬಾಟಲಿಯ ಸಮೇತ ಠಾಣೆಗೆ ಕರೆದುಕೊಂಡು ಬಂದು ಎಸ್ ಹೆಚ್ಓ ರವರ ಮುಂದೆ ಹಾಜರುಪಡಿಸಿದ್ದೆ.
ನನ್ನ ವರದಿಯ ಮೇರೆಗೆ ಎಸ್‍ಹೆಚ್‍ಓ ಅವರು ಪ್ರಕರಣ ದಾಖಲಿಸುತ್ತಿರುವಾಗ ರಾತ್ರಿ 11.45 ಕ್ಕೆ ಹಾಸನದ ಶಾಸಕರಾದ ಪ್ರೀತಂ ಗೌಡ ರವರು ತಮ್ಮೊಂದಿಗೆ 15 ರಿಂದ 20 ಜನರನ್ನು ಕರೆದುಕೊಂಡು ಠಾಣೆಗೆ ಬಂದರು. ಈ ಬಗ್ಗೆ ಪಕ್ರರಣವನ್ನು ದಾಖಲಿಸುವುದು ಬೇಡ ಎಂದು ಬಂಧಿಸಿದ್ದ ವೇಣು ಮತ್ತು ಇಬ್ಬರು ಸ್ನೇಹಿತರನ್ನು ಠಾಣೆಯಿಂದ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಾರೆ. ಆಗ ನಾನು ಬಂಧಿತ ಆರೋಪಿಗಳನ್ನ ಈ ರೀತಿ ಠಾಣೆಯಿಂದ ಕರೆದುಕೊಂಡು ಹೋಗುವುದು ಸರಿಯಲ್ಲ ಅವರುಗಳ ಮೇಲೆ ಪ್ರಕರಣ ದಾಖಲಾಗುತ್ತಿದೆ ಎಂದು ತಿಳಿ ಹೇಳಿದರೂ ಕೇಳದೆ ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಬಲವಂತದಿಂದ ವೇಣು ಮತ್ತು ಇಬ್ಬರು ಸ್ನೇಹಿತರನ್ನು ಕರೆದುಕೊಂಡು ಹೋಗಿರುತ್ತಾರೆ. ಆದ್ದರಿಂದ ಹಾಸನದ ಶಾಸಕರಾದ ಪ್ರೀತಂಗೌಡ ಹಾಗೂ ಅವರ ಜೊತೆಯಲ್ಲಿದ್ದ ಸುಮಾರು 15 ರಿಂದ 20 ಜನರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv