– ಪುತ್ರನಿಗೆ ತಾಯಿ ಲೀಲಾವತಿ ಸಾಥ್
ಬೆಂಗಳೂರು: ಕೊರೊನಾ ವೈರಸ್ ಹರಡದಂತೆ ಎಚ್ಚರ ವಹಿಸುವುದರ ಭಾಗವಾಗಿ ನಟ ವಿನೋದ್ ರಾಜ್ ತಮ್ಮ ಹಳ್ಳಿಯನ್ನು ಕಾಪಾಡಲು ಮುಂದಾಗಿದ್ದು, ಇಡೀ ಗ್ರಾಮದ ರಸ್ತೆ ಹಾಗೂ ಮನೆಯ ಗೋಡೆಗಳಿಗೆ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ.
ಸ್ವಗ್ರಾಮ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಟ ವಿನೋದ್ ರಾಜ್ ರಾಸಾಯನಿಕ ಸಿಂಪಡಣೆ ಮಾಡಿಸಿದ್ದು, ಈ ಮೂಲಕ ತಮ್ಮ ಗ್ರಾಮದ ಸುರಕ್ಷತೆಗೆ ಮುಂದಾಗಿದ್ದಾರೆ. ಹಿರಿಯ ನಟಿ ಡಾ.ಲೀಲಾವತಿ ಸಹ ಇದಕ್ಕೆ ಕೈ ಜೋಡಿಸಿದ್ದಾರೆ. ನಟ ವಿನೋದ್ ರಾಜ್ ಅವರು ಸ್ವತಃ ಕ್ರಿಮಿನಾಶಕ ಗನ್ ಹಿಡಿದು ಸಿಂಪಡಿಸಿದ್ದಾರೆ. ಗ್ರಾಮಕ್ಕೆ ವೈರಸ್ ಕಾಲಿಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಔಷಧಿಯನ್ನು ಸಿಂಪಡಣೆ ಮಾಡಿಸಿದ್ದಾರೆ.
- Advertisement
- Advertisement
ಗ್ರಾಮದ ಬೀದಿ, ಮನೆಗಳ ಗೋಡೆಗಳಿಗೆ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ. ವಿನೋದ್ ರಾಜ್ ಅವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಡೀ ಗ್ರಾಮವೇ ನಟ ವಿನೋದ್ ರಾಜ್ ಬೆಂಬಲಕ್ಕೆ ನಿಂತು ಗ್ರಾಮದ ಸ್ವಚ್ಛತೆಗೆ ಮುಂದಾಗಿದೆ. ತಮ್ಮ ತೋಟದಲ್ಲಿ ಬಳಸುವ ಮಿನಿ ಟ್ರ್ಯಾಕ್ಟರ್ ಹಾಗೂ ಪಂಪ್ ಸಹಾಯದಿಂದ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದಾರೆ.
ಈ ವೇಳೆ ಹಿರಿಯ ನಟಿ ಲೀಲಾವತಿ ಅವರು ಕೈಮುಗಿದು ಬೇಡಿಕೊಂಡಿದ್ದು, ಎಲ್ಲರೂ ಚೆನ್ನಾಗಿ ಬಾಳಬೇಕು ಅಂತ ಇಲ್ಲಿ ಬಂದವರು. ಆದರೆ ದೇವರು ಕಷ್ಟ ಕೊಟ್ಟಿದ್ದಾನೆ. ಕೊರೊನಾ ವೈರಸ್ ನಮ್ಮ ಕರ್ಮ ಆಗಿಬಿಟ್ಟಿದೆ. ಸರ್ಕಾರದ ಕಾನೂನು ಮೀರಬೇಡಿ, ಮನೆಯಲ್ಲೇ ಇದ್ದು ಸಹಕರಿಸಿ. ನಿಮ್ಮ ಮನೆ, ಜಾಗವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಪೊಲೀಸರು ಹೊಡೆದರು ಎಂದು ಹೇಳುವ ಬದಲು ಹೊಡೆಯದ ಹಾಗೆ ಇರಿ. ಮಾಸ್ಕ್ ಧರಿಸಿ ಶುಚಿತ್ವ ಕಾಪಾಡಿ ಎಂದು ಮನವಿ ಮಾಡಿದ್ದಾರೆ.