ಮುಂಬೈ: ಟೀಂ ಇಂಡಿಯಾ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಹಾಗೂ ನಾಯಕ ವಿರಾಟ್ ಕೊಹ್ಲಿ ನಡುವಿನ ಭಿನ್ನಾಭಿಪ್ರಾಯವೇ ಕುಂಬ್ಳೆ ಕೋಚ್ ಹುದ್ದೆಯಿಂದ ಕೆಳಗಿಳಿಯಲು ಕಾರಣ ಎಂಬುವುದು ಈಗಾಗಲೇ ತಿಳಿದಿದೆ. ಸದ್ಯ ಸಂದರ್ಶನವೊಂದರಲ್ಲಿ ಮಾತನಾಡಿರುವ ಬಿಸಿಸಿಐ ಆಡಳಿತ ಸಮಿತಿ ಮಾಜಿ ಅಧ್ಯಕ್ಷ ವಿನೋದ್ ರಾಯ್ ಈ ಕುರಿತು ಸ್ಫೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿರುವ ವಿನೋದ್ ರಾಯ್, ಕೋಚ್ ಹಾಗೂ ನಾಯಕನ ನಡುವಿನ ಭಿನ್ನಾಭಿಪ್ರಾಯವೇ ಕುಂಬ್ಳೆ ಕೋಚ್ ಸ್ಥಾನದಿಂದ ಕೆಳಗಿಳಿಯಲು ಕಾರಣ. ಆದರೆ ಅಂದು ನನಗೆ ಅವರನ್ನು ಉಳಿಸಿಕೊಳ್ಳುವ ಅಧಿಕಾರವಿರಲಿಲ್ಲ. ನನಗೆ ಅಧಿಕಾರವಿದ್ದಿದ್ದರೆ ಅವರನ್ನು ಕೋಚ್ ಸ್ಥಾನದಲ್ಲಿಯೇ ಉಳಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
33 ತಿಂಗಳ ಕಾಲ ಸಿಒಎ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ 71 ವರ್ಷದ ವಿನೋದ್ ರಾಯ್ ಅವರು, ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂದು ಹೇಳಿದ್ದಾರೆ. ಕುಂಬ್ಳೆ ತಾವು ಕಂಡ ಅದ್ಭುತ ಕೋಚ್ ಆಗಿದ್ದು, ಅವರ ಮೇಲೆ ನನಗೆ ಅತೀವ ಗೌರವವಿದೆ. ನನ್ನ ಅವಧಿಯಲ್ಲಿ ಅವರ ಕಾಲಾವಧಿಯನ್ನು ಹೆಚ್ಚಿಸುವ ಅವಕಾಶ ಲಭಿಸಿದ್ದರೆ ಖಂಡಿತ ನಾನು ಆ ಕೆಲಸ ಮಾಡುತ್ತಿದೆ. ಆದರೆ ಕೊಹ್ಲಿರೊಂದಿಗೆ ಭಿನ್ನಾಭಿಪ್ರಾಯ ಉಂಟಾದ ಬಳಿಕ ಅವರನ್ನು ಉಳಿಸಿಕೊಳ್ಳುವ ಅವಕಾಶ ನನಗೆ ಲಭಿಸಲಿಲ್ಲ. ಇಂದು ಅಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಗಂಗೂಲಿ ಬಲವಂತವಾಗಿಯಾದರೂ ಕೂಡ ಕುಂಬ್ಳೆರನ್ನು ಕೋಚ್ ಹುದ್ದೆಯಲ್ಲಿ ಮುಂದುವರಿಸುತ್ತಿದ್ದರು. ಆದರೆ ಅನಿಲ್ ಕುಂಬ್ಳೆ ವಿವಾದ ಉಂಟಾಗುವ ಮೊದಲೇ ಸ್ವತಃ ಕೋಚ್ ಹುದ್ದೆಯನ್ನು ಗೌರವಯುತವಾಗಿ ತೊರೆದರು ಎಂದು ತಿಳಿಸಿದ್ದಾರೆ.
ಕುಂಬ್ಳೆರನ್ನು ಮುಂದುವರಿಸುವ ಕುರಿತು ನಾನು ಸಲಹಾ ಸಮಿತಿಯ ಸದಸ್ಯರಾಗಿದ್ದ ಸಚಿನ್, ಗಂಗೂಲಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದೆ. ಆದರೆ ಕೋಚ್ ಸ್ಥಾನದಲ್ಲಿ ಕುಂಬ್ಳೆ ಅವರು ಮುಂದುವರಿಯುವುದನ್ನು ಕೊಹ್ಲಿ ಬಯಸಿರಲಿಲ್ಲ. ಈ ಬಗ್ಗೆ ಸಚಿನ್, ಕೊಹ್ಲಿರೊಂದಿಗೆ ಮಾತನಾಡಿದ್ದರೂ ಕೂಡ ಅವರ ಮನವೊಲಿಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ.
ಗಂಗೂಲಿ ಅಧ್ಯಕ್ಷ ಸ್ಥಾನಕ್ಕೆ ಬಂದಿರುವುದರಿಂದ ಇಂತಹ ಪರಿಸ್ಥಿತಿಗಳು ಮತ್ತೆ ಉದ್ಭವಿಸುವುದಿಲ್ಲ ಎಂಬ ವಿಶ್ವಾಸವಿದೆ. ಗಂಗೂಲಿ ಯಾವುದೇ ವಿಷಯವನ್ನಾದರೂ ಕೂಡ ಡೀಲ್ ಮಾಡುವ ಸಮರ್ಥರಾಗಿದ್ದಾರೆ ಎಂದು ವಿನೋದ್ ರಾಯ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.