ನವದೆಹಲಿ: ಹರಿಯಾಣದ (Haryan) ಶಂಭು ಗಡಿಯಲ್ಲಿ (Shambhu Border) ನಡೆಯುತ್ತಿರುವ ರೈತರ ಪ್ರತಿಭಟನೆ 200ನೇ ದಿನ ತಲುಪಿದ್ದು, ಪ್ರತಿಭಟನಾ ಸ್ಥಳಕ್ಕೆ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಭೇಟಿ ನೀಡಿ ಬೆಂಬಲ ಸೂಚಿಸಿದ್ದಾರೆ. ರೈತರ ಪ್ರಮುಖ ಬೇಡಿಕೆಗಳನ್ನು ಬೆಂಬಲಿಸಿದ ಅವರು ಅನ್ನದಾತರ ಕುಂದುಕೊರತೆಗಳನ್ನು ಆಲಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ರೈತರ ಹೋರಾಟ ಬೆಂಬಲಿಸಿ ಮಾತನಾಡಿದ ಅವರು, ರೈತರು ಇಲ್ಲಿ ಕುಳಿತು 200 ದಿನಗಳು ಕಳೆದಿವೆ. ಇದನ್ನು ನೋಡಿ ನೋವಾಗಿದೆ. ಈ ದೇಶದ ಪ್ರಜೆಗಳಾಗಿರುವ ರೈತರು ದೇಶವನ್ನು ನಡೆಸುತ್ತಾರೆ. ಅವರು ದೇಶಕ್ಕೆ ಅನ್ನ ನೀಡದಿದ್ದರೆ ಕ್ರೀಡಾಪಟುಗಳು ಮಾತ್ರವಲ್ಲ, ಯಾರು ಏನೂ ಮಾಡಲು ಸಾಧ್ಯವಿಲ್ಲ. ನಾವು ದೊಡ್ಡ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುತ್ತೇವೆ. ಆದರೆ ನಮ್ಮ ಕುಟುಂಬ ದುಃಖದಲ್ಲಿರುವುದು ನೋಡಿದಾಗ ನಾವು ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಕಳೆದ ಬಾರಿ ತನ್ನ ತಪ್ಪನ್ನು ಸರ್ಕಾರ ಒಪ್ಪಿಕೊಂಡಿತ್ತು. ಹೀಗಾಗಿ ಕಳೆದ ಬಾರಿ ನೀಡಿದ ಭರವಸೆಗಳನ್ನು ಈಡೇರಿಸಬೇಕು. ಜನರು ಈ ರೀತಿ ಬೀದಿಯಲ್ಲಿ ಕುಳಿತರೆ ದೇಶವು ಪ್ರಗತಿಯಾಗುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಏರ್‌ಲಿಫ್ಟ್ ವೇಳೆ ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನ
ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು. ಕೇಂದ್ರ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ರೈತರು ಕಳೆದ ಫೆಬ್ರವರಿಯಲ್ಲಿ ದೆಹಲಿ ಚಲೋ ಹಮ್ಮಿಕೊಂಡಿದ್ದರು. ಪ್ರತಿಭಟನಾ ನಿರತ ರೈತರನ್ನು ಶಂಭು ಗಡಿಯಲ್ಲೇ ಭದ್ರತಾ ಪಡೆಗಳು ತಡೆದು ನಿಲ್ಲಿಸಿವೆ. ಈ ಹಿನ್ನೆಲೆ ಸದ್ಯ ರೈತರು ಕಳೆದ 200 ದಿನಗಳಿಂದ ಶಂಭು ಗಡಿಯಲ್ಲಿ ಪ್ರತಿಭಟನೆಗೆ ಕೂತಿದ್ದಾರೆ.
ಈ ನಡುವೆ, ರೈತರ ಪ್ರತಿಭಟನೆಯು ಬಾಂಗ್ಲಾದೇಶದಂತೆಯೇ ಭಾರತದಲ್ಲಿ ಅರಾಜಕತೆಗೆ ಕಾರಣವಾಗಬಹುದೆಂದು ಆರೋಪಿಸಿ ನಟಿ, ಸಂಸದೆ ಕಂಗನಾ ರಣಾವತ್ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ರಣಾವತ್ ವಿರುದ್ಧ ನಿರ್ಣಾಯಕ ಕ್ರಮ ಜರುಗಿಸಲು ರೈತರು ಒತ್ತಾಯಿಸಿದ್ದಾರೆ. ಈ ಹೇಳಿಕೆಯಿಂದ ದೂರ ಉಳಿದಿರುವ ಬಿಜೆಪಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದನ್ನೂ ಓದಿ: ಚನ್ನಪಟ್ಟಣ ಟಿಕೆಟ್ ಫೈಟ್; ಜೆ.ಪಿ.ನಡ್ಡಾ ಭೇಟಿಯಾದ ರಾಜ್ಯ ಬಿಜೆಪಿ ನಾಯಕರು