ಧಾರವಾಡ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವ ಸಿ.ಟಿ.ರವಿ ಮಧ್ಯೆ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ಕುರಿತು ವಾಗ್ವಾದ ಮುಂದುವರಿದಿದೆ. ಸಿದ್ದರಾಮಯ್ಯನವರಿಗೆ ಪುಸ್ತಕ ತಲುಪಿಸಲು ಸಾಧ್ಯವಾಗಿಲ್ಲ, ನಾನೇ ಖುದ್ದಾಗಿ ತೆರಳಿ ಪುಸ್ತಕ ನೀಡುತ್ತೇನೆ ಸಿ.ಟಿ.ರವಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಪುಸ್ತಕವನ್ನು ಸಿದ್ದರಾಮಯ್ಯನವರಿಗೆ ತಲುಪಿಸುತ್ತೇನೆಂದು ಹೇಳಿದ್ದೆ. ಕೆಲಸದ ಒತ್ತಡದಿಂದ ಪುಸ್ತಕ ತಲುಪಿಸಲು ಸಾಧ್ಯವಾಗಿಲ್ಲ. ಶೀಘ್ರದಲ್ಲೇ ಸಿದ್ದರಾಮಯ್ಯನವರನ್ನು ಖುದ್ದು ಭೇಟಿಯಾಗಿ ಪುಸ್ತಕ ನೀಡಿ, ಮಾತನಾಡುತ್ತೇನೆ ಎಂದರು.
ಸಿದ್ದರಾಮಯ್ಯನವರು ಸಾವರ್ಕರ್ ಅವರ ಆತ್ಮಾಹುತಿ ಪುಸ್ತಕವನ್ನು ಓದಲಿ, ಅಭಿನವ ಭಾರತ ಸಂಘಟನೆ ಯಾಕೆ ಕಟ್ಟಿದರು ತಿಳಿದು ನಂತರ ಅವರ ಬಗ್ಗೆ ಮಾತನಾಡಲಿ. ಅಧಿಕಾರ ಹಿಡಿಯುತ್ತಿದ್ದ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಕುಟುಂಬವನ್ನೇ ಸಾವರ್ಕರ್ ಅರ್ಪಿಸಿದರು. ಸತ್ಯ ಸಂಗತಿ ತಿಳಿದರೆ ಸಾವರ್ಕರ್ ಗೆ ಅಪಮಾನ ಮಾಡುವ ಕೆಲಸವಾಗುವುದಿಲ್ಲ. ಇದು ಸಾವರ್ಕರ್ ಗೆ ಮಾಡುವ ಅಪಮಾನ ಅಲ್ಲ, ಅವರಷ್ಟಕ್ಕೆ ಅವರೇ ಮಾಡಿಕೊಂಡ ಅಪಮಾನ ಎಂದರು.
ಸಾವರ್ಕರ್ ಬಗ್ಗೆ ಸತ್ಯ ಸಂಗತಿ ತಿಳಿದರೆ ಭಾರತ ಮಾತೆಗೆ ಅವಮಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುವುದಿಲ್ಲ. ಇದು ಅವರಿಗೆ ಮಾಡುವ ಅಪಮಾನ ಅಲ್ಲ. ಇಂಥವರ ಬಗ್ಗೆ ಮಾತನಾಡಿದರೆ ಅವರ ಮುಖಕ್ಕೆ ಅವರೇ ಉಗಿದುಕೊಂಡಂತೆ ಎಂದು ಕಿಡಿಕಾರಿದರು.
ಇನ್ನೊಂದು ವಿಚಾರವೆಂದರೆ ನಾಥೂರಾಮ್ ಗೋಡ್ಸೆ ಗಾಂಧಿ ದೇಹಕ್ಕೆ ಮಾತ್ರ ಗುಂಡು ಹಾಕಿದ. ಆದರೆ ಮಹಾತ್ಮ ಗಾಂಧಿ ತತ್ವಾದರ್ಶಗಳನ್ನು ಜನಮಾನಸದಿಂದ ದೂರ ಮಾಡಿದವರು ಯಾರು ಎಂದು ಚರ್ಚೆಯಾಗಬೇಕು. ಗಾಂಧೀಜಿಯ ಪಕ್ಷದವರು ನಾವು ಎಂದು ಹೇಳುತ್ತಾರೆ. ಆದರೆ ನಿಜವಾಗಿಯೂ ಇವರು ಗಾಂಧೀಜಿಯ ತತ್ವದ ವಾರಸುದಾರರಾಗಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರ, ಹರಿಯಾಣ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು, ಸೋಲುತ್ತೇವೆ ಎಂದು ಗೊತ್ತಾಗಿಯೇ ಮುಂಚಿತವಾಗಿಯೇ ಇವಿಎಂ ಮೇಲೆ ಬೆರಳು ಮಾಡುತ್ತಿದ್ದಾರೆ. ಅವರು ಗೆದ್ದರೆ ಜನಾದೇಶ, ಬಿಜೆಪಿ ಗೆದ್ದರೆ ಇವಿಎಂ ದೋಷ ಎನ್ನುತ್ತಾರೆ. ಇವರು ಸೋತ ತಕ್ಷಣ ಇವಿಎಂನಲ್ಲಿ ಲೋಪ ಎನ್ನುತ್ತಾರೆ. ಹಿಂದೆ ಗಾಂಧೀಜಿ ಕಾಂಗ್ರೆಸ್ ವಿಸರ್ಜನೆ ಮಾಡಿ ಅಂದಿದ್ದರು. ಅದನ್ನು ಈಗ ಜನರೇ ಮಾಡುತ್ತಿದ್ದಾರೆ ಎಂದು ಹೇಳಿ ತಿರುಗೇಟು ನೀಡಿದರು.