ವಿಭಿನ್ನ ಶೀರ್ಷಿಕೆ ಹೊಂದಿರುವ ಚಿತ್ರಗಳ ಸಾಲಿಗೆ ಸೇರಲಿರುವ ಮತ್ತೊಂದು ಚಿತ್ರ ಇಂಟರ್ ವೆಲ್. ಇಂಜಿನಿಯರಿಂಗ್ ಸ್ಟಡಿ ಮುಗಿಸಿದ ಯುವಕರ ಕೆಲಸ ಹುಡುಕುತ್ತ ನಡೆಸೋ ಹೋರಾಟದ ಕಥೆಯನ್ನು ಹೇಳುವ ಇಂಟರ್ ವೆಲ್ (Interwell) ಚಿತ್ರಕ್ಕೆ ಭರತ್ ವರ್ಷ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ತನ್ನ ಚಿತ್ರೀಕರಣ ಹಾಗೂ ಪೊಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಚಿತ್ರವೀಗ ಬಿಡುಗಡೆಯ ಹಂತದಲ್ಲಿದೆ. ರಿಲೀಸ್ ಸಿದ್ದತೆಯಲ್ಲಿರುವ ಈ ಚಿತ್ರದ ಫಸ್ಟ್ ಲುಕ್ ಪೊಸ್ಟರ್ ನ್ನು ಇತ್ತೀಚೆಗೆ ಅಣ್ಣಾವ್ರ ಕುಟುಂಬದ ಕುಡಿ, ಯುವನಟ ವಿನಯ್ ರಾಜ್ ಕುಮಾರ್ (Vinay Rajkumar) ಅವರು ಬಿಡುಗಡೆ ಮಾಡಿ ಶೀರ್ಷಿಕೆ ತುಂಬಾ ಚೆನ್ನಾಗಿದೆ. ಚಿತ್ರವೂ ಪನರ ಮನ ಗೆಲ್ಲಲಿ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇಂಟರ್ ವೆಲ್ ಚಿತ್ರಕ್ಕೆ ಬೆಂಗಳೂರು ಹಾಗೂ ಶಿವಮೊಗ್ಗದ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಎ.ಬಿ ಅರ್ಜುನ್ ಹಾಗೂ ಎಸ್.ಬಿ ರಾಠೋಡ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಸುಖಿ ಅವರು ಬರೆದಿದ್ದಾರೆ. ಚಿತ್ರದ ಐದು ಹಾಡುಗಳಿಗೆ ವಿಕಾಸ್ ವಿಶಿಷ್ಟ ಅವರ ಸಂಗೀತ ನಿರ್ದೇಶನವಿದ್ದು, ಪ್ರಮೋದ್ ಮರವಂತೆ ಹಾಗೂ ಸುಖಿ ಸಾಹಿತ್ಯ ಬರೆದಿದ್ದಾರೆ. ಚಿತ್ರಕ್ಕೆ ರಾಜ್ ಕಾಂತ್ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರೆ, ಶಶಿಧರ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ.
ಅನೇಕ ಧಾರಾವಾಹಿಗಳಲ್ಲಿ ನಟಿಸಿರುವಂತ ಶಶಿರಾಜ್ (ಬಾಲಾ) ಅವರು ಈ ಚಿತ್ರದಲ್ಲಿ ಮೊದಲಬಾರಿಗೆ ನಾಯಕನಾಗಿ ಅಭಿನಯಿಸಿದ್ದಾರೆ, ರಂಗಭೂಮಿ ನಟ ಪ್ರಜ್ವಲ್ ಗೌಡ , ಸುಖಿ, ಹಾಗೂ ರಂಗನಾಥ ಶಿವಮೊಗ್ಗ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಇಬ್ಬರು ನಾಯಕ ನಟಿಯರಿದ್ದಾರೆ.