ಬೆಂಗಳೂರು: ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ವಿನಯ್ ಕುಲಕರ್ಣಿಗೆ ನಿನ್ನೆ ಸುಪ್ರೀಂ ಕೋರ್ಟ್ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಈ ಹಿನ್ನಲೆಯಲ್ಲಿ ಇಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗ್ರಹದಿಂದ ವಿನಯ್ ಕುಲಕರ್ಣಿ ರಿಲೀಸ್ ಆಗಿದ್ದಾರೆ.
ಜೈಲಿನಿಂದ ಹೊರಬಂದ ವಿನಯ್ ಕುಲಕರ್ಣಿ ದೇವರ ಮೊರೆ ಹೋದರು. ಚೆಕ್‌ಪೋಸ್ಟ್ ಬಳಿ ಇರುವ ದೇವರಿಗೆ ಈಡುಗಾಯಿ ಹೊಡೆದು ಹೊರಬಂದಿದ್ದಾರೆ. ವಿನಯ್ ಕುಲಕರ್ಣಿ ಅಭಿಮಾನಿಗಳು ಹೂವಿನ ಹಾರ ಹಾಕಿ ಸಿಹಿ ತಿನ್ನಿಸಿ ಸ್ವಾಗತ ಕೋರಿದರು.
ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಸುಪ್ರೀಂ ಕೋರ್ಟ್ ಬೇಲ್ ನೀಡಿದೆ. ಜೈಲಿಗೆ ಹೋಗಿರುವುದರಿಂದ ನನ್ನ ಕ್ಷೇತ್ರದ ಜನಕ್ಕೆ ಸಾಕಷ್ಟು ತೊಂದರೆಯಾಗಿದ್ದು, ಕ್ಷೇತ್ರದ ಜನರ ಕೆಲಸವನ್ನು ಮಾಡುತ್ತೇನೆ. ಕೋರ್ಟ್ ನೀಡಿರುವ ಷರತ್ತಿನಂತೆ ನಡೆದುಕೊಳ್ಳುತ್ತೇನೆ. ನ್ಯಾಯಾಂಗದ ಮೇಲೆ ನನಗೆ ನಂಬಿಕೆ ಇದೆ ಎಂದು ಹೇಳಿಕೆ ನೀಡಿದ್ದಾರೆ.

