ಧಾರವಾಡ: ಜಿಪಂ ಸದಸ್ಯ ಯೋಗಿಶಗೌಡ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಸಾಕ್ಷ್ಯನಾಶ ಆರೋಪದಡಿ ಧಾರವಾಡ ಕೈ ಅಭ್ಯರ್ಥಿ ವಿನಯ್ ಕುಲಕರ್ಣಿ ಮೇಲೆ ಎಫ್‍ಐಆರ್ ದಾಖಲಿಸಲು ಕೋರ್ಟ್ ಸೂಚನೆ ನೀಡಿದ್ದು, ಇದಕ್ಕೆಲ್ಲಾ ಪ್ರಹ್ಲಾದ್ ಜೋಶಿ ಕಾರಣ ಎಂದು ವಿನಯ್ ಕುಲಕರ್ಣಿ ಆರೋಪಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನ್ಯಾಯಾಂಗದ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ಆದರೆ ಯಾವತ್ತೋ ಆಗಿರುವ ಕೇಸ್ ಚುನಾವಣೆಯಲ್ಲಿಯೇ ಯಾಕೆ ಬಂತು ಎನ್ನುವುದು ನನ್ನ ಪ್ರಶ್ನೆ. ಆ ಕೇಸ್ ಹಾಕಿರುವ ಗುರುನಾಥಗೌಡ ಪ್ರಹ್ಲಾದ ಜೋಶಿ ಜೊತೆಯೇ ಇರುತ್ತಾರೆ. ಹಾಗಾದ್ರೆ ಯಾರೂ ಈ ಕೇಸ್ ಮಾಡಿದಂತಾಯ್ತು? ನಾನು ಆರೋಪಿಯೂ ಇಲ್ಲ, ಎಫ್‍ಐಆರ್ ನಲ್ಲಿಯೂ ಇಲ್ಲ, ಚಾರ್ಜ್ ಶೀಟ್‍ನಲ್ಲಿಯೂ ಇಲ್ಲ. ಆದರೆ ಈಗ ಚುನಾವಣೆ ಸಮಯದಲ್ಲಿ ಪ್ರಹ್ಲಾದ್ ಜೋಶಿ ಇಂತಹ ಕುತಂತ್ರ ತಂದಿದ್ದಾರೆ ಎಂದು ಕಿಡಿಕಾರಿದರು.
Advertisement
Advertisement
ಯೋಗಿಶಗೌಡ ಕೊಲೆ ಪ್ರಕರಣದಲ್ಲಿ 62 ಸಾಕ್ಷಿಗಳು ಇದ್ದವು, ಅದರಲ್ಲಿ 59 ಸಾಕ್ಷಿಗಳು ಮುಗಿದಿವೆ. ಧಾರವಾಡದಲ್ಲಿ ಏನು ಆದರೂ ವಿನಯ್ ಕುಲಕರ್ಣಿ ಮಾತ್ರ ಕಾಣುತ್ತಾರೆ. ಒಂದು ಮನೆಯನ್ನು ಇಬ್ಭಾಗ ಮಾಡುವಂತಹ ಕುತಂತ್ರಿ ಪ್ರಹ್ಲಾದ್ ಜೋಶಿ. ಈ ಕೇಸ್ ಆಗಿ ಎರಡ್ಮೂರು ವರ್ಷ ಆದ ಮೇಲೆ ಈಗ ಮತ್ತೆ ವಿಚಾರ ಎತ್ತಿದ್ದಾರೆ. ಇದೆಲ್ಲವೂ ಪ್ರಹ್ಲಾದ್ ಜೋಶಿ ಕುತಂತ್ರ ಎಂದು ವಿನಯ್ ಕುಲಕರ್ಣಿ ಹರಿಹಾಯ್ದರು.
Advertisement
Advertisement
ಏನಿದು ಪ್ರಕರಣ?
ಜಿ.ಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ, ಪೊಲೀಸ್ ಅಧಿಕಾರಿಗಳಾದ ತುಳಜಪ್ಪ ಸುಲ್ಪಿ ಹಾಗೂ ಚಂದ್ರಶೇಖರ್ ವಿರುದ್ಧ ಕೂಡ ಎಫ್‍ಐಆರ್ ದಾಖಲಿಸಿಕೊಳ್ಳುವಂತೆ ಧಾರವಾಡ ಜೆಎಂಎಫ್‍ಸಿ ಕೋರ್ಟ್ ಆದೇಶಿಸಿದೆ. ಜಿ.ಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳ ಮೇಲೆ ಒತ್ತಡ ಹಾಗೂ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಈ ಕೊಲೆ ಪ್ರಕರಣ 2017ರಲ್ಲಿ ನಡೆದಿದ್ದು, ಯೋಗೀಶಗೌಡ ಅವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಜನ ಆರೋಪಿಗಳು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆ ಆರು ಜನರೂ ಕೂಡ ವಿನಯ್ ಅವರ ಅನುಯಾಯಿಗಳೇ ಆಗಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಸಚಿವ ವಿನಯ್ ಅವರ ಕೈವಾಡ ಇದೆ ಎಂದು ಯೋಗೀಶಗೌಡರ ಪತ್ನಿ ಮಲ್ಲಮ್ಮ ಸಂಶಯ ವ್ಯಕ್ತಪಡಿಸಿದ್ದರು.