Connect with us

ಸ್ಮಶಾನದಿಂದ ಶವಗಾರಕ್ಕೆ ಮತ್ತೆ ಹೆಣ ತಂದ ವಿಮ್ಸ್ ಸಿಬ್ಬಂದಿ

ಸ್ಮಶಾನದಿಂದ ಶವಗಾರಕ್ಕೆ ಮತ್ತೆ ಹೆಣ ತಂದ ವಿಮ್ಸ್ ಸಿಬ್ಬಂದಿ

ಬಳ್ಳಾರಿ: ಸ್ಮಶಾನಕ್ಕೆ ಅಂತ್ಯಕ್ರಿಯೆ ಮಾಡಲು ಒಯ್ದ ಶವವೊಂದನ್ನು ವಿಮ್ಸ್ ಸಿಬ್ಬಂದಿ ಮರಳಿ ಶವಗಾರಕ್ಕೆ ತಂದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಬಳ್ಳಾರಿಯ ವಿಮ್ಸ್ ಸಿಬ್ಬಂದಿ ಯಡವಟ್ಟು ಇದೀಗ ಮತ್ತೊಮ್ಮೆ ರುಜುವಾಗಿದೆ. ಯಲ್ಲಮ್ಮ ಎನ್ನುವ 61 ವರ್ಷದ ವೃದ್ಧ ಮಹಿಳೆ ಸೆ. 4ರಂದು ಮನೆಯಿಂದ ಹೊರಬಂದಾಗ ಮೂರ್ಛೆ ಹೋಗಿ ರಸ್ತೆಯಲ್ಲಿ ಬಿದ್ದಿದ್ದರು. ವೃದ್ಧ ಮಹಿಳೆ ರಸ್ತೆಯಲ್ಲಿ ಬಿದ್ದಿದನ್ನು ಕಂಡ ಸ್ಥಳೀಯರು ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಯಲ್ಲಮ್ಮ ಕಾಣೆಯಾಗಿ ಎರಡು ದಿನಗಳ ಬಳಿಕ ಅವರ ಸಂಬಂಧಿಕರು ಚಿಕಿತ್ಸೆ ಕೊಡಿಸುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಯಲ್ಲಮ್ಮ ಶನಿವಾರ ಮುಂಜಾನೆ ಮೃತಪಟ್ಟ ನಂತರ ಶವವನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಲಾಗಿತ್ತು. ಯಲ್ಲಮ್ಮನ ಸಂಬಂಧಿಕರು ಸಂಜೆ ಅಂತ್ಯಕ್ರಿಯೆ ನಡೆಸಲು ಬಳ್ಳಾರಿಯ ಆಲದಹಳ್ಳಿಯ ಬಳಿ ಸಿದ್ಧತೆ ಮಾಡುವ ವೇಳೆ ಎಚ್ಚೆತ್ತುಕೊಂಡ ವಿಮ್ಸ್ ಸಿಬ್ಬಂದಿ ಹಾಗೂ ಕೌಲಬಜಾರ ಪೊಲೀಸ್ ಠಾಣೆಯ ಹೊರ ಠಾಣೆಯ ಸಿಬ್ಬಂದಿಗಳು ಅಂತ್ಯಕ್ರಿಯೆ ತಡೆದು ಮರಳಿ ಶವಗಾರಕ್ಕೆ ಶವವನ್ನು ತಂದಿದ್ದಾರೆ.

ಯಲ್ಲಮ್ಮ ವಿಮ್ಸ್ ಆಸ್ಪತ್ರೆಗೆ ದಾಖಲಾದ ವೇಳೆ ಪೊಲೀಸರು ಅನಾಮಧೇಯ ಮಹಿಳೆ ಎಂದು ದೂರು ದಾಖಲಿಸಿಕೊಂಡಿದ್ದರು. ಆದ್ರೆ ಮಹಿಳೆ ಸತ್ತ ನಂತರ ಶವಪರೀಕ್ಷೆ ಮಾಡದೇ ಶವ ಹಸ್ತಾಂತರ ಮಾಡಿದ್ದು, ನಂತರ ಅಂತ್ಯಕ್ರಿಯೆ ವೇಳೆ ಸ್ಮಶಾನಕ್ಕೆ ಹೋಗಿ ಶವವನ್ನು ಮರಳಿ ಶವಪರೀಕ್ಷೆಗೆ ತಂದಿದ್ದಾರೆ. ಇದು ವಿಮ್ಸ್ ಸಿಬ್ಬಂದಿ ಯಡವಟ್ಟುನ್ನು ಎತ್ತಿ ತೋರಿಸುತ್ತಿದೆ. ಅಲ್ಲದೇ ಸ್ಮಶಾನಕ್ಕೆ ಒಯ್ದ ಶವವನ್ನು ಮರಳಿ ಶವಗಾರಕ್ಕೆ ತಂದಿರುವುದು ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement
Advertisement