ಚಿಕ್ಕಮಗಳೂರು: ಜೀವ ಉಳಿಸಿದ ವೀರ ಯೋಧರಿಗೆ ಗ್ರಾಮಸ್ಥರು ರಾಖಿ ಕಟ್ಟುವ ಮೂಲಕ ಬೀಳ್ಕೊಡುಗೆ ಕೊಟ್ಟಿದ್ದಾರೆ.
ಚಿಕ್ಕಮಗಳೂರಿನ ಮೂಡಿಗೆರೆ ಗ್ರಾಮಸ್ಥರು, ನಿಮ್ಮಿಂದ ನಮ್ಮ ಜೀವ ಉಳಿದಿದೆ ಎಂದು ಕಣ್ಣೀರಿಟ್ಟು ಪ್ರತಿಯೊಬ್ಬ ಸೈನಿಕರಿಗೂ ರಾಖಿ ಕಟ್ಟಿದ್ದಾರೆ. ಈ ವೇಳೆ ಸೈನಿಕರು ತಂದಿದ್ದ ಹಣ್ಣು, ಬಿಸ್ಕೆಟ್‍ಗಳನ್ನು ಸಂತ್ರಸ್ತರಿಗೆ ಹಂಚಿದ್ದಾರೆ.
ಯೋಧರ ರಕ್ಷಣಾ ಕಾರ್ಯಾಚರಣೆ ನೋಡಿ ನೂರಾರು ಜನರು ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೆ ಇಂಡಿಯನ್ ಆರ್ಮಿ ಸದಾ ನಿಮ್ಮ ಜೊತೆ ಇರುತ್ತದೆ. ನೀವು ಯಾವಾಗ ಕರೆದರೂ ನಿಮ್ಮ ಸೇವೆಗೆ ಸಿದ್ಧ ಎಂದು ಭಾರತೀಯ ಸೇನೆ ತಿಳಿಸಿದೆ. ಸದ್ಯ ಮಿಲಿಟರಿ ಪಡೆ ಕಾರ್ಯಾಚರಣೆ ಮುಗಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಗ್ರಾಮಸ್ಥರು ಕಣ್ಣೀರು ಹಾಕುತ್ತಲೇ ಯೋಧರಿಗೆ ಬೀಳ್ಕೊಡುಗೆ ಕೊಟ್ಟಿದ್ದಾರೆ.
ಮೂಡಿಗೆರೆ ತಾಲೂಕಿನ ಹಲಗಡಕ ಗ್ರಾಮದಲ್ಲಿ ಗುಡ್ಡ ಕುಸಿತವಾಗಿತ್ತು. ಹೀಗಾಗಿ ಗ್ರಾಮದ ಮಾರ್ಗ ಬಂದ್ ಆಗಿ ಕಳೆದ 6 ದಿನಗಳಿಂದ ಗ್ರಾಮದಲ್ಲಿ ಸಿಲುಕಿಕೊಂಡಿದ್ದ 10ಕ್ಕೂ ಮಂದಿಯನ್ನು ಸೇನಾಪಡೆ ಸೋಮವಾರ ರಕ್ಷಣೆ ಮಾಡಿದೆ. ವಾಹನ ವ್ಯವಸ್ಥೆ ಇಲ್ಲದ ಕಾರಣಕ್ಕೆ 4 ರೋಗಿಗಳನ್ನು 5 ಕಿ.ಮೀ. ಹೆಗಲ ಮೇಲೆಯೇ ಹೊತ್ತು ಸಾಗಿಸುವ ಮೂಲಕ ತಂಡ ಸುರಕ್ಷಿತ ಸ್ಥಳಗಳಿಗೆ ಕರೆದುಕೊಂಡು ಹೋಗಿದ್ದಾರೆ.