ಅಕ್ರಮವಾಗಿ ಒತ್ತುವರಿಯಾಗಿದ್ದ ಜಾಗ ಶಾಲೆಗೆ ವಾಪಸ್ – ತಹಶೀಲ್ದಾರ್‌ಗೆ ಗ್ರಾಮಸ್ಥರಿಂದ ಅಭಿನಂದನೆ

Public TV
1 Min Read
SCHOOL CHAITHRADURGA 1

ಚಿತ್ರದುರ್ಗ: ಅಕ್ರಮವಾಗಿ ಒತ್ತುವರಿ ಮಾಡಲಾಗಿದ್ದ ಸರ್ಕಾರದ ಜಾಗವನ್ನು ಗೋಸಿಕೆರೆ ಹೊಸಕಪಿಲೆ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಗೆ ತಹಶೀಲ್ದಾರ್ ಎನ್.ರಘುಮೂರ್ತಿ ನೇತೃತ್ವದಲ್ಲಿ ವಾಪಸ್ ಕೊಡಿಸಲಾಯಿತು.

ಚಳ್ಳಕೆರೆ ತಾಲೂಕಿನ ಹೊಸಕಪಿಲೆ ಗ್ರಾಮದ ಸರ್ಕಾರಿ ಶಾಲೆಯ ವ್ಯಾಪ್ತಿಗೊಳಪಟ್ಟ ಖಾಲಿ ಜಾಗವು 2.16 ಗುಂಟೆ ಇದ್ದು, ಇದರಲ್ಲಿ 1.14 ಖಾಲಿ ಜಾಗ ಒತ್ತುವರಿಯಾಗಿತ್ತು. ಹೊಸಕಪಿಲೆ ಗ್ರಾಮಸ್ಥರು ಈ ಹಿಂದೆ ಇದ್ದ ತಹಶೀಲ್ದಾರ್ ಗಮನಕ್ಕೆ ತಂದಿದ್ದರೂ ಹಲವು ಕಾರಣಾಂತರಗಳಿಂದ ಒತ್ತುವರಿ ತೆರವು ಆಗಿರಲಿಲ್ಲ. ಇದನ್ನೂ ಓದಿ: ಪಾರಿವಾಳ ವಿಚಾರ ಕೊಲೆಯಲ್ಲಿ ಅಂತ್ಯ

 SCHOOL CHAITHRADURGA

ಈ ವಿಷಯವನ್ನು ತಹಶೀಲ್ದಾರ್ ರಘುಮೂರ್ತಿ ಅವರಿಗೆ ಬಿಇಓ ಹಾಗೂ ಗ್ರಾಮದ ಮುಖಂಡರು ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಇಂದು ಗೋಸಿಕೆರೆ ಹೊಸಕಪಿಲೆಗೆ ಭೇಟಿ ನೀಡಿ ದಾಖಲಾತಿಗಳನ್ನು ಪರಿಶೀಲಿಸಿದರು. ಸರ್ವೇ ಅಧಿಕಾರಿಗಳಿಂದ ಮಾಹಿತಿ ಪಡೆದು ಒತ್ತುವರಿ ಮಾಡಿಕೊಂಡ ಗ್ರಾಮಸ್ಥರೊಂದಿಗೆ ಮಾತನಾಡಿದ ರಘುಮೂರ್ತಿ ಅವರು, ಸರ್ಕಾರಿ ಜಾಗ ಅಕ್ರಮವಾಗಿ ಒತ್ತುವರಿ ಮಾಡಬಾರದು. ಅದರಲ್ಲೂ ಶಾಲೆ ಜಾಗವನ್ನು ಒತ್ತುವರಿ ಮಾಡಬಾರದು ಎಂದು ಮನವಿ ಮಾಡಿಕೊಂಡರು.

ಎಲ್ಲ ಮಕ್ಕಳಿಗೆ ಬೇಕಾಗಿರುವುದು ಶಿಕ್ಷಣ. ಇಂತಹ ಶಿಕ್ಷಣಕ್ಕೆ ಬೇಕಾಗಿರುವ ಶಾಲಾ ಜಾಗವನ್ನು ಒತ್ತುವರಿ ಮಾಡಬಾರದು ಎಂದು ಬುದ್ಧಿವಾದ ಹೇಳುವ ಮೂಲಕ ಒತ್ತುವರಿ ಮಾಡಿಕೊಂಡಿದ್ದ ವ್ಯಕ್ತಿಯಿಂದ ಸರ್ಕಾರಿ ಶಾಲೆಗೆ ಖಾಲಿ ಜಾಗವನ್ನು ಹಸ್ತಾಂತರಿಸಲಾಯಿತು.

corona hubballi school

ಸರ್ಕಾರಿ ಜಾಗವನ್ನು ಬಿಟ್ಟುಕೊಡಲು ಒಪ್ಪಿದ ಕಾರಣ ತಕ್ಷಣ ಸರ್ವೇ ಅಧಿಕಾರಿಗೆ ಒತ್ತುವರಿ ಮಾಡಿದ ಎಕರೆ ಜಾಗವನ್ನು ಅಳತೆ ಮಾಡಿ ಶಾಲೆಯ ಸುಪರ್ದಿಗೆ ತೆಗೆದುಕೊಳ್ಳಲು ಸೂಚನೆ ನೀಡಿದರು. ಈ ಸಮಯದಲ್ಲಿ ಶಾಲಾ ಜಾಗವನ್ನು ಬಿಡಿಸಿಕೊಟ್ಟ ತಹಶೀಲ್ದಾರ್ ಗೆ ಅಲ್ಲಿನ ಗ್ರಾಮಸ್ಥರು ಅಭಿನಂದಿಸಿದರು. ಇದನ್ನೂ ಓದಿ: ನವೋದಯದಲ್ಲಿ ಕೋವಿಡ್ ಕೇರ್ ಕೇಂದ್ರ ತೆರೆಯಬೇಡಿ – ಕೊಡಗಿನ ಪೋಷಕರಿಂದ ವಿರೋಧ

ಈ ವೇಳೆ ಟಿ.ಎನ್.ಕೋಟೆ ಗ್ರಾಮಪಂಚಾಯಿತಿ ಅಧ್ಯಕ್ಷರಾದ ನವೀನ್ ಗ್ರಾಮಪಂಚಾಯಿತಿ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಇಸಿಓ ರವಿಶಂಕರ್, ಶಿಕ್ಷಕರಾದ ಗಂಗಾನಾಯಕ್ ಹಾಗೂ ಗ್ರಾಮಸ್ಥರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *