ಮಂಡ್ಯ: ಕಳೆದ ಹತ್ತು ವರ್ಷದಿಂದ ಇಲ್ಲದವರು ಈಗ ಯಾಕೆ ಬಂದಿದ್ದೀರಿ? ನಮ್ಮ ಮನೆಯಲ್ಲಿ ನಿಮ್ಮ ಕೊಡುಗೆ ಏನೂ ಇಲ್ಲ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ರಮೇಶ್‍ಬಾಬು ಬಂಡಿಸಿದ್ದೇಗೌಡ ಅವರನ್ನು ಮತದಾರರು ಗದರಿಸಿ ಕಳುಹಿಸಿದ ಘಟನೆ ನಡೆದಿದೆ.
ಶ್ರೀರಂಗಪಟ್ಟಣದ ಹದಿನೈದನೇ ವಾರ್ಡ್ ಕಾವೇರಿಪುರಕ್ಕೆ ರಮೇಶ್‍ಬಾಬು ಬಂಡಿಸಿದ್ದೇಗೌಡ ಶುಕ್ರವಾರ ಸಂಜೆ ಮತ ಕೇಳಲು ಹೋಗಿದ್ದರು. ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಸತತ ಎರಡು ಬಾರಿ ಗೆದ್ದು, ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ರಮೇಶ್ ಬಂಡಿಸಿದ್ದೇಗೌಡರನ್ನು ನೋಡಿದ್ದೇ ತಡ ಮತದಾರರು ಕೆಂಡಾಮಂಡಲರಾಗಿದ್ದಾರೆ.
ಕಳೆದ ಹತ್ತು ವರ್ಷದಿಂದ ಬರದವರು ಈಗ ಯಾಕೆ ಬಂದಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಮತದಾರರ ಆಕ್ರೋಶ ನೋಡುತ್ತಿದ್ದಂತೆಯೇ ರಮೇಶ್‍ಬಾಬುಗೆ ಬೆಂಬಲಿಗರು ಜೈಕಾರ ಕೂಗಲಾರಂಭಿಸಿದ್ದಾರೆ. ಜೈಕಾರದ ನಡುವೆ ರಮೇಶ್‍ಬಾಬು ಮತಹಾಕುವಂತೆ ಕೇಳಿಕೊಂಡಿದ್ದಾರೆ.
ಇದರಿಂದ ಮತ್ತಷ್ಟು ಕೆರಳಿದ ವ್ಯಕ್ತಿಯೊಬ್ಬ ಜೋರು ಧ್ವನಿಯಲ್ಲಿ ನಾನು ಬರೋದು ಇಲ್ಲ. ನಿನಗೆ ಓಟ್ ಹಾಕೋದಿಲ್ಲ. ನಮ್ಮ ಮನೆಯಲ್ಲಿ ನಿಮ್ಮ ಕೊಡುಗೆ ಏನೂ ಇಲ್ಲ ಎಂದು ನೇರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಕೇಳಿ ರಮೇಶ್ ಬಾಬು ಬೆಂಬಲಿಗರು ನಿಮ್ಮ ಓಟ್ ನೀವೇ ಇಟ್ಟುಕೊಳ್ಳಿ, ಬೇರೆಯವರ ಕೈಲಿ ಕೆಲಸ ಮಾಡಿಸಿಕೊಳ್ತೀರ ಎಂದು ಪ್ರಶ್ನೆ ಮಾಡಿದ್ದಾರೆ. ಇದ್ರಿಂದ ಮತ್ತಷ್ಟು ಕೆರಳಿದ ಮತದಾರ, ಅಯ್ಯೋ ನಮ್ಮ ಓಟ್ ನಾವೇ ಇಟ್ಟುಕೊಳ್ಳುತ್ತೇವೆ, ಬೇರೆಯವರಿಂದ ಕೆಲಸ ಮಾಡಿಸಿಕೊಳ್ಳುತ್ತೇವೋ ಬಿಡುತ್ತೇವೋ ಬೇಡ ಬಿಡಿ ಎಂದು ಖಾರವಾಗಿ ಉತ್ತರಿಸಿದ್ದಾರೆ. ಇದನ್ನು ನೋಡಿದ ಬೆಂಬಲಿಗರು ಜೋರಾಗಿ ಪ್ರಶ್ನೆ ಮಾಡುತ್ತಿದ್ದ ವ್ಯಕ್ತಿಗೆ, ಏನೋ ಕಡೀತಿದೆಯಾ ಎಂದು ಅವಾಜ್ ಹಾಕಿದ್ದಾರೆ. ಈ ವೇಳೆ ಪ್ರಶ್ನೆ ಮಾಡುತ್ತಿದ್ದ ಯುವಕನ ಬೆಂಬಲಕ್ಕೆ ಬಂದ ಮಹಿಳೆಯರು ಶಾಸಕರ ಬೆಂಬಲಿಗರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಈಗ ಬಂದಿದ್ದೀರಾ ಹೋಗಿ ಎಂದು ಅವಾಜ್ ಹಾಕಿ ಕಳುಹಿಸಿದ್ದಾರೆ.
ಮತದಾರರ ಆಕ್ರೋಶ ನೋಡಿ ವಿಧಿಯಿಲ್ಲದೇ ರಮೇಶ್‍ಬಾಬು ಬಂಡಿಸಿದ್ದೇಗೌಡ ಸ್ಥಳದಿಂದ ಕಾಲ್ಕಿತ್ತಿದ್ದಾರೆ.