ಚಿಕ್ಕಮಗಳೂರು: ಹದಗೆಟ್ಟ ರಸ್ತೆಯಿಂದಾಗಿ ಬೇಸತ್ತ ಗ್ರಾಮಸ್ಥರು ರಸ್ತೆಯಲ್ಲೇ ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮಣ್ಣಿನಕೂಡಿಗೆ ಗ್ರಾಮದಲ್ಲಿ ನಡೆದಿದೆ.
ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮಣ್ಣಿನಕೂಡಿಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು, ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಈ ಬಗ್ಗೆ ಗ್ರಾಮಸ್ಥರು ರಸ್ತೆ ದುರಸ್ಥಿ ಮಾಡಿಸುವಂತೆ ಸಾಕಷ್ಟು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
Advertisement
Advertisement
ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನಕ್ಕೆ ಬೇಸತ್ತ ಗ್ರಾಮಸ್ಥರು ಇಂದು ರಸ್ತೆಯಲ್ಲೇ ಉಳುಮೆ ಮಾಡಿ ಭತ್ತದ ಸಸಿಗಳನ್ನು ನಾಟಿ ಮಾಡಿದ್ದಾರೆ. ಈ ಮೂಲಕವಾದರೂ ಶಾಸಕರು ಹಾಗೂ ಸರ್ಕಾರ ಇತ್ತ ಗಮನ ಹರಿಸುತ್ತಾರೆಯೇ ಎಂಬುದು ಗ್ರಾಮಸ್ಥರ ಆಶಯವಾಗಿದೆ.
Advertisement
ಗ್ರಾಮದ ಹದಗೆಟ್ಟ ರಸ್ತೆಯಿಂದಾಗಿ ವಾಹನಗಳು ಸಂಚರಿಸುವುದು ಕಷ್ಟವಾಗಿದೆ. ಇದರಿಂದಾಗಿ ಮಕ್ಕಳು ಶಾಲೆಗೆ ಹೋಗಲು ಆಗುತ್ತಿಲ್ಲ. ಸಂಪರ್ಕ ಕಲ್ಪಿಸುವ ರಸ್ತೆಯೇ ಹಾಳಾಗಿರುವುದರಿಂದ ಜೀವನ ನಡೆಸುವುದು ಸಹ ಕಷ್ಟವಾಗಿದೆ. ಅಲ್ಲದೇ ಗುರುವಾರ ಬಾಣಂತಿಯನ್ನ ಆಸ್ಪತ್ರೆಗೆ ಕರೆದೊಯ್ಯಲು ಗ್ರಾಮಸ್ಥರು ಹರಸಾಹಸವನ್ನೇ ಪಟ್ಟಿದ್ದಾರೆ. ರಸ್ತೆಯ ಅವಸ್ಥೆಯನ್ನು ಖಂಡಿಸಿ, ಗ್ರಾಮಸ್ಥರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.