ಕಾರವಾರ: ಗಣೇಶ ಚತುರ್ಥಿ ಬಂದರೆ ಹಬ್ಬದ ಊಟದ ಸವಿ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ವಿಶೇಷವಾಗಿರುತ್ತದೆ. ವರ್ಷಕ್ಕೆ ಒಂದು ಬಾರಿ ಮನೆಗೆ ಬರುವ ಗಣೇಶನಿಗಾಗಿ ಪಂಚಗಜ್ಜಾಯ, ಮೋದಕ, ಹೋಳಿಗೆ, ಚಕ್ಕುಲಿ ಮಾಡುವುದು ಸಾಮಾನ್ಯ. ಆದರೆ ಈ ಊರಿನಲ್ಲಿ ಗಣೇಶ ಚತುರ್ಥಿಯಿಂದ 15 ದಿನಗಳ ಕಾಲ ಚಕ್ಕುಲಿಗಳನ್ನು ತಯಾರು ಮಾಡಿ ಕಂಬಳ ಮಾಡುವ ಮೂಲಕ ಇಡೀ ಊರಿಗೆ ಚಕ್ಕುಲಿ ಹಂಚಿ ವಿಶೇಷವಾಗಿ ಆಚರಿಸುತ್ತಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಗಡೆಕಟ್ಟ ಕಲ್ಮನೆ ಗ್ರಾಮಗಳಲ್ಲಿ ಗಣೇಶ ಚುತುರ್ಥಿಯ ಅಂಗವಾಗಿ ಚಕ್ಕುಲಿ ಕಂಬಳ ಹಬ್ಬವನ್ನು ಆಚರಿಸುತ್ತಾರೆ. ಹಬ್ಬಕ್ಕೆ 15 ದಿನ ಇರುವಾಗ ಊರಿನ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯಲ್ಲಿ 50 ಕೆ.ಜಿಯಷ್ಟು ಅಕ್ಕಿಯನ್ನು ಹದಗೊಳಿಸಿ ಹಿಟ್ಟನ್ನು ತಯಾರಿಸಿಕೊಂಡು ಹಬ್ಬದ ದಿನದಿಂದ 20 ದಿನಗಳವರೆಗೆ ಪ್ರತಿ ಮನೆಗೆ ತೆರಳಿ ಚಕ್ಕುಲಿ ತಯಾರಿಸುತ್ತಾರೆ. ಇದಕ್ಕಾಗಿ 15 ಜನರ ತಂಡವೊಂದು ಊರಿನ ಪ್ರತಿಯೊಬ್ಬರ ಮನೆಗೂ ತೆರಳಿ ಅವರ ಮನೆಯಲ್ಲಿ ಚಕ್ಕುಲಿ ತಯಾರಿಸುತ್ತಾರೆ.
Advertisement
Advertisement
ವಿಶೇಷವಾಗಿ ಗ್ರಾಮದ ಜನರು ಸಾಮೂಹಿಕವಾಗಿ ಕೈಯಿಂದ ಹಿಟ್ಟನ್ನು ಹೊಸೆದು ಚಕ್ಕುಲಿ ತಯಾರಿಸಿ ಸಂಜೆ ವೇಳೆಯಲ್ಲಿ ಇಡೀ ಊರಿನ ಜನರು ಸೇರಿ ಚಕ್ಕುಲಿಯನ್ನು ಸವಿಯುತ್ತಾರೆ. ಇದಲ್ಲದೇ ಪ್ರತಿ ಮನೆಯಲ್ಲಿ 20 ರಿಂದ 50 ಕೆಜಿಗೂ ಹೆಚ್ಚು ಚಕ್ಕುಲಿಯನ್ನು ತಯಾರಿಸಿ ಊರಿನ ಜನರಿಗೆ ಹಾಗೂ ಬಂದ ಅತಿಥಿಗಳಿಗೆ ಹಂಚಿ ಸಂಭ್ರಮಪಡುತ್ತಾರೆ. ಕಾಲ ಬದಲಾದಂತೆ ಮನುಷ್ಯನು ವೈಜ್ಞಾನಿಕತೆಗೆಯ ಉಪಕರಣಗಳಿಗೆ ಅಂಟಿಕೊಂಡರೂ, ಈ ಭಾಗದ ಜನರು ಮಾತ್ರ ಸಂಪ್ರದಾಯಿಕವಾಗಿ ಕೈಯಿಂದಲೆ ಹಿಟ್ಟನ್ನು ಹೊಸೆದು ಚಕ್ಕುಲಿ ತಯಾರಿಸುತ್ತಾರೆ.
Advertisement
Advertisement
50ಕ್ಕೂ ಹೆಚ್ಚು ಮನೆಯಿರುವ ಈ ಊರಿನಲ್ಲಿ ಗಣೇಶ ಚತುರ್ಥಿ ದಿನದಿಂದ 20 ದಿನಗಳವರೆಗೆ ಪ್ರತಿ ಮನೆಯಲ್ಲಿ ಚಕ್ಕುಲಿ ಕಂಬಳ ನಡಸಲಾಗುತ್ತದೆ. ಎಷ್ಟೇ ವೈರತ್ವವಿದ್ದರೂ ಈ ಊರಿನಲ್ಲಿ ಪ್ರತಿ ಮನೆಗೆ ತೆರಳಿ ಚಕ್ಕುಲಿ ತಯಾರಿಸಿ ತಿಂದು ರುಚಿ ಸವಿಯಲೇ ಬೇಕು. ಇದರಿಂದಾಗಿ ತಮ್ಮ ತಮ್ಮ ನಡುವಿನ ವೈರತ್ವ ಕಮ್ಮಿಯಾಗಿ ಒಗ್ಗಟ್ಟು ಮೂಡುತ್ತದೆ ಎಂಬ ಭಾವನೆ ಈ ಊರಿನವರದ್ದು. ಹೀಗಾಗಿ 50 ವರ್ಷಗಳಿಂದ ಈ ಚಕ್ಕುಲಿ ಕಂಬಳ ಆಚರಿಸಿಕೊಂಡು ಬರುತಿದ್ದು ತಮ್ಮ ಊರಿನವರಲ್ಲದೇ ಹೊರೂರಿನವರನ್ನೂ ಈ ಕಂಬಳಕ್ಕೆ ಆಹ್ವಾನಿಸುತ್ತಾರೆ.
ಹೊರ ಊರಿನವರಿಗೆ ಹೊಟ್ಟೆ ತುಂಬ ಚಕ್ಕುಲಿ ನೀಡುವ ಜೊತೆಗೆ ಚೀಲದ ತುಂಬಾ ಚಕ್ಕುಲಿ ನೀಡಿ ಅಥಿತ್ಯ ಮಾಡುತ್ತಾರೆ. ನಾವು ನಮ್ಮ ಊರಿನಲ್ಲಿ ಚತುರ್ಥಿಯನ್ನು ಚಕ್ಕುಲಿ ಕಂಬಳ ಮಾಡುವ ಮೂಲಕ ವಿಶೇಷವಾಗಿ ಆಚರಿಸುತ್ತೇವೆ. ಹಿಂದಿನಿಂದಲೂ ಬಂದ ಸಂಪ್ರದಾಯವನ್ನು ಈವರೆಗೂ ರೂಡಿಸಿಕೊಂಡು ಬಂದಿದ್ದೇವೆ ಕೈಯಿಂದ ಹೊಸೆದು ಮಾಡುವುದರಿಂದ ಚಕ್ಕುಲಿ ನಾಲ್ಕು ತಿಂಗಳಿಗೂ ಹೆಚ್ಚುಕಾಲ ಬಾಳಿಕೆ ಬರುತ್ತದೆ ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv