-ಇದು ರಾಯಚೂರು ಜಿಲ್ಲೆಯ ಜಿ.ಪಂ.ಸಿಇಓ ರ `ಕೂರ್ಮಾ’ವತಾರ
ರಾಯಚೂರು: ಬರಗಾಲದಿಂದ ತತ್ತರಿಸಿರುವ ರಾಯಚೂರಿನ ಜನತೆಗೆ ಬಿರು ಬೇಸಿಗೆ ಜಲಕ್ಷಾಮದ ಬರೆ ಎಳೆದಿದೆ. ರಾಯಚೂರು ತಾಲೂಕಿನ ಆತ್ಕೂರು ಗ್ರಾಮದ ಜನ ತಮ್ಮ ಕಷ್ಟವನ್ನ ಮನವರಿಕೆ ಮಾಡಿಕೊಡಲು ಅಧಿಕಾರಿಯನ್ನ ಹೊತ್ತುಕೊಂಡು ಕರೆದೊಯ್ದು ಸಮಸ್ಯೆಗಳನ್ನ ತೋರಿಸಿದರು. ಕುಡಿಯುವ ನೀರಿನ ಟ್ಯಾಂಕ್‍ಗೆ ನೀರು ಹೋಗದೆ ಎಲ್ಲೆಂದರಲ್ಲಿ ಹರಿದ ಪರಿಣಾಮ ಕೊಳಚೆ ದಾಟಲು ಹಿಂದು-ಮುಂದು ನೋಡಿದ ಜಿಲ್ಲಾ ಪಂಚಾಯ್ತಿ ಸಿಇಓ ಕೂರ್ಮರಾವ್ ಅವರನ್ನ ಗ್ರಾಮಸ್ಥರೇ ಹೊತ್ತುಕೊಂಡು ಟ್ಯಾಂಕ್ ಬಳಿ ಕರೆದೊಯ್ದರು. ಈ ಮೂಲಕ ಗ್ರಾಮಕ್ಕೆ ಶುದ್ಧ ಕುಡಿಯುವ ನೀರನ್ನ ಕೊಟ್ಟರೆ ತಲೆ ಮೇಲೆ ಬೇಕಾದ್ರು ಹೊತ್ತುಕೊಳ್ಳಲು ಗ್ರಾಮಸ್ಥರು ಸಿದ್ಧರಿದ್ದಾರೆ ಎನ್ನುವುದು ಸತ್ಯ.
Advertisement
ಯಾವುದೇ ಗ್ರಾಮಕ್ಕೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಹೋಗಲು ಹೆದರುತ್ತಿದ್ದಾರೆ. ಗ್ರಾಮಸ್ಥರ ತಾಳ್ಮೆ ಮಿತಿ ಮೀರಿದ್ದು ಅವರ ಆಕ್ರೋಶ, ಸಿಟ್ಟಿಗೆ ಆಡಳಿತ ವರ್ಗ ಅಂಜುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆಯ ಪರಿಶೀಲನೆಗಾಗಿ ರಾಯಚೂರು ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿದ್ದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನ ಗ್ರಾಮಸ್ಥರೇ ತರಾಟೆ ತೆಗೆದುಕೊಂಡು ತಮ್ಮ ಅಳಲು ತೋಡಿಕೊಂಡಿದ್ದಾರೆ. ಹೆಗಲ ಮೇಲೆ ಹೊತ್ತುಕೊಂಡು ಪರಿಹಾರ ಕೊಡಿ ಅಂತ ಆಗ್ರಹಿಸಿದ್ದಾರೆ.
Advertisement
Advertisement
ಇದು ಒಂದೆಡೆಯಾದ್ರೆ ಬೂರ್ದಿಪಾಡ ಗ್ರಾಮದಲ್ಲಿ ಜನ ಅಧಿಕಾರಿಗಳನ್ನ ಹಿಗ್ಗಾಮುಗ್ಗಾ ತರಾಟೆಗೆ ಒಳಪಡಿಸಿದರು. ಕಾಟಾಚಾರಕ್ಕೆ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಲಸ ಮಾಡುತ್ತಿಲ್ಲ. ಬೋರ್‍ವೆಲ್, ಪೈಪ್‍ಲೈನ್ ಎಲ್ಲಾ ಇದ್ರೂ ಟ್ಯಾಂಕ್‍ಗೆ ನೀರು ಹರಿಸುವ ವ್ಯವಸ್ಥೆಯಿಲ್ಲ ಅಂತ ಕಿಡಿಕಾರಿದ್ರು. ದೇವಸುಗೂರು ಗ್ರಾಮದಲ್ಲಿ ಮಹಿಳೆಯರು ಕೊಡಗಳನ್ನ ಹಿಡಿದು ನೀರು ಕೊಡಿ ಅಂತ ಜಿಲ್ಲಾ ಪಂಚಾಯ್ತಿ ಸದಸ್ಯರಿಗೆ ಹಾಗೂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೂರ್ಮರಾವ್‍ಗೆ ಮುತ್ತಿಗೆ ಹಾಕಿದ್ರು.
Advertisement
ಜನರ ಆಕ್ರೋಶ ಹಾಗೂ ನೀರಿನ ಸಮಸ್ಯೆಯನ್ನ ಕಣ್ಣಾರೆ ಕಂಡ ಅಧಿಕಾರಿಗಳು ಒಂದು ಸ್ಥಳದಲ್ಲಿ ಹೆಚ್ಚು ಕಾಲ ನಿಲ್ಲಲೇ ಇಲ್ಲಾ. ಈಗಾಗಲೇ ಅಗತ್ಯ ಕ್ರಮಗಳನ್ನ ಕೈಗೊಂಡಿದ್ದೇವೆ, ಶುದ್ಧ ಕುಡಿಯುವ ನೀರಿನ ಘಟಕಗಳನ್ನ ಗ್ರಾಮಸ್ಥರು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅಪೂರ್ಣ ಕಾಮಗಾರಿಗಳನ್ನ ಶೀಘ್ರದಲ್ಲಿ ಪೂರ್ಣಗೊಳಿಸಲು ಸೂಚಿಸುವುದಾಗಿ ಕೂರ್ಮರಾವ್ ಹೇಳಿ ಅಲ್ಲಿಂದ ತೆರಳಿದರು.
ಒಟ್ನಲ್ಲಿ, ಜನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವರ್ತನೆಯಿಂದ ಬೇಸತ್ತು ಹೋಗಿದ್ದಾರೆ. ಕೇವಲ ಭರವಸೆಗಳನ್ನ ನೀಡುತ್ತಾರೆ ಹೊರತು ಶುದ್ಧ ಕುಡಿಯುವ ನೀರನ್ನ ಯಾರೂ ಕೊಡುತ್ತಿಲ್ಲ ಅಂತ ಕೆಂಡಾಮಂಡಲವಾಗಿದ್ದಾರೆ. ಈಗಲಾದ್ರೂ ಜಿಲ್ಲಾಪಂಚಾಯ್ತಿ ಹಾಗೂ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನ ಕೈಗೊಂಡು ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಬೇಕಿದೆ.