ಬೆಳಗಾವಿ: ಮಳೆಗಾಲ ಆರಂಭವಾಗಿ ಹತ್ತು ದಿನ ಕಳೆದಿದ್ದರು ಬೆಳಗಾವಿ ಜಿಲ್ಲೆಯಾದ್ಯಂತೆ ಮಳೆಯಾಗಿರಲಿಲ್ಲ. ಬಿತ್ತನೆ ಮಾಡಬೇಕಿದ್ದ ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಆ ಗ್ರಾಮದ ಜನರು ಮಾತ್ರ ಊರ ಮಧ್ಯದಲ್ಲಿರುವ ದೇವರಿಗೆ ಜಲದಿಗ್ಬಂಧನ ಮಾಡಿ ಏಳು ದಿನಗಳಲ್ಲಿ ಮಳೆಯಾಗುವಂತೆ ಕೋರಿಕೊಂಡಿದ್ದರು. ಭಕ್ತರ ಇಚ್ಛೆಯಂತೆ ಮಳೆ ಸುರಿದಿದ್ದು, ಕೊನೆಗೂ ದೇವರಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.
ಮಳೆ ಬಾರದಿದ್ದರೆ ದೇವರಿಗೆ ವಿಶೇಷ ಪೂಜೆ ಹೋಮ ಹವನಗಳನ್ನು ಮಾಡಿದ್ದನ್ನ ನಾವು ಕೇಳಿದ್ದೇವೆ ನೋಡಿದ್ದೇವೆ. ಆದರೆ ಮಳೆ ಬರಬೇಕೆಂಬ ಕಾರಣಕ್ಕೆ ದೇವರಿಗೆ ಜಲದಿಗ್ಬಂಧನ ಹಾಕಿ ಮಳೆ ಬರೆಸಿದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ. ಭೀಕರ ಬರಕ್ಕೆ ಕಂಗೆಟ್ಟಿದ್ದ ಜನರು ದೇವರ ಪೂಜೆಮಾಡಿ ಮಳೆರಾಯನ ಕರೆಯುತ್ತಿದ್ದರೆ, ಆದರೆ ಈ ಗ್ರಾಮದ ಜನರು ಒಟ್ಟಾಗಿ ಗ್ರಾಮದಲ್ಲಿರುವ ಸೂರ್ಯನಾರಾಯಣ ದೇವರಿಗೆ ಪೂಜೆ ಸಲ್ಲಿಸಿ ಆ ನಂತರ ಗರ್ಭಗುಡಿಯಲ್ಲಿ ನೀರು ಹಾಕಿ ಜಲದಿಗ್ಬಂಧನ ಮಾಡಿ ಗರ್ಭ ಗುಡಿಗೆ ಬೀಗ ಹಾಕಿದ್ದರು.
Advertisement
Advertisement
ಹೀಗೆ ಬೀಗ ಹಾಕುವ ಮುನ್ನ ಏಳು ದಿನಗಳಲ್ಲಿ ಮಳೆ ಬರಬೇಕೆಂದು ದೇವರಿಗೆ ಡೆಡ್ ಲೈನ್ ಕೂಡ ನೀಡಿದ್ದರು. ಈ ರೀತಿ ಜಲದಿಗ್ಬಂಧನ ಹಾಕಿದ ನಾಲ್ಕೇ ದಿನಕ್ಕೆ ಮಳೆಯಾಗಿದೆ. ಭಾನುವಾರ ಇಡೀ ದಿನ ಮಳೆ ಸುರಿದ ಕಾರಣ ಸೋಮವಾರ ಬೆಳಗ್ಗೆ ಸೂರ್ಯನಾರಾಯಣ ದೇವರಿಗೆ ಬಿಡುಗಡೆ ಮಾಡಿದ್ದಾರೆ. ಅದು ಗರ್ಭಗುಡಿಗೆ ಹಾಕಿದ್ದ ಕೀಲಿಯನ್ನು ತೆಗೆದು ಆ ನಂತರ ದೇವರ ಮೂರ್ತಿ ಸುತ್ತು ಮುತ್ತ ಹಾಕಿದ್ದ ನೀರಿನ್ನು ತೆಗೆದು ಸ್ವಚ್ಛಗೊಳಿಸಿ ವಿಶೇಷ ಪೂಜೆಯನ್ನು ಮಾಡಿದ್ದಾರೆ.
Advertisement
Advertisement
ಏಳು ದಿನದ ಒಳಗೆ ಮಳೆಯಾಗಿದ್ದಕ್ಕೆ ಇಡೀ ಗ್ರಾಮಸ್ಥರು ಸಂತಸ ಪಟ್ಟುಕೊಂಡಿದ್ದು ಹೀಗಾಗಿ ಸೋಮವಾರ ಬೆಳಗ್ಗೆ ದೇವರಿಗೆ ಹಾಕಿದ್ದ ದಿಗ್ಬಂಧನ ತೆರವುಗೊಳಿಸಿದ್ದಾರೆ. ಎಲ್ಲ ಗ್ರಾಮದ ಮುಖಂಡರು ಸೇರಿಕೊಂಡು ಸೋಮವಾರ ದೇವರಿಗೆ ವಿಶೇಷ ಪೂಜೆ ಮಾಡಿ ನಂತರ ಅನ್ನ ಪ್ರಸಾದ ಮಾಡುವ ಚಿಂತನೆ ಮಾಡಿ ಎಲ್ಲರೂ ಒಟ್ಟಾಗಿ ದೇವರ ಬಾಗಿಲು ತೆಗೆದು ಸೂರ್ಯನಾರಾಯಣ ದೇವರಿಗೆ ವಿಭಿನ್ನವಾಗಿ ಹೂಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆಯನ್ನ ಸಲ್ಲಿಸಿದ್ದಾರೆ. ಇದಾದ ಬಳಿಕ ದೇವಸ್ಥಾನದ ಪಕ್ಕದಲ್ಲೇ ಪ್ರಸಾದ ಸಿದ್ಧಪಡಿಸಿ ಇಡೀ ಗ್ರಾಮಸ್ಥರಿಗೆ ಅನ್ನ ಸಂತರ್ಪಣೆ ಕಾರ್ಯ ಮಾಡಿದ್ದಾರೆ.
ಮಳೆ ಯಾವಾಗ ಬರುವುದಿಲ್ಲವೋ ಅದನ್ನ ನೋಡಿಕೊಂಡು ಗ್ರಾಮದ ಎಲ್ಲ ಮುಖಂಡರು ಚರ್ಚೆ ಮಾಡಿ ದೇವರಿಗೆ ಈ ರೀತಿ ಜಲದಿಗ್ಬಂಧನ ಮಾಡಿ ಒಂದು ಡೆಡ್ ಲೈನ್ ಕೊಟ್ಟು ಅಷ್ಟರಲ್ಲಿ ಮಳೆಯಾಗುವಂತೆ ಕೇಳಿಕೊಳ್ಳುತ್ತಾರೆ. ಹೀಗೆ ಕೇಳಿಕೊಂಡ ನಂತರ ಮಳೆಯಾಗುತ್ತೆ ಎಂಬ ನಂಬಿಕೆ ಇಲ್ಲಿಯವರದ್ದು. ಈ ಕಾರಣಕ್ಕೆ ಈ ವರ್ಷ ಕೂಡ ಮಳೆಗಾಗಿ ದಿಗ್ಬಂಧನ ಹಾಕಿದ್ದರು ಗ್ರಾಮಸ್ಥರ ಆಸೆಯಂತೆ ಈ ಬಾರಿ ಕೂಡ ಮಳೆಯಾಗಿದ್ದಕ್ಕೆ ಈ ಭಾಗದ ಎಲ್ಲರೂ ಖುಷಿಯಲ್ಲಿದ್ದಾರೆ.