ಬೆಳಗಾವಿ: ಜಿಲ್ಲೆಯ ಕುಳ್ಳೂರ ಗ್ರಾಮದಲ್ಲಿ ಭೂಮಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಭಯದಿಂದ ದೇವರ ಮೊರೆ ಹೋಗಿದ್ದಾರೆ.
ಕುಳ್ಳೂರ ಗ್ರಾಮದಲ್ಲಿ ಏಕಾಏಕಿ ಕಳೆದ ಹದಿನೈದು ದಿನಗಳಿಂದ ಕಿ.ಮೀ ಗಟ್ಟಲೆ ಭೂಮಿ ಬಾಯಿ ಬಿಡುತ್ತಿದೆ. ರಸ್ತೆ ಸೇರಿದಂತೆ ಜಮೀನುಗಳಲ್ಲಿ ಭೂಮಿ ಕುಸಿದು ಕಂದಕಗಳು ನಿರ್ಮಾಣ ಆಗುತ್ತಿದೆ. ಯಾವುದೇ ಅನಾಹುತ ಮತ್ತು ಭೂ ಕುಸಿತವಾಗದಿರಲಿ ಎಂದು ಕುಸಿದ ಜಾಗದಲ್ಲೇ ಗ್ರಾಮಸ್ಥರು ಭೂಮಿ ತಾಯಿಗೆ ಪೂಜೆ ಸಲ್ಲಿಸಿದ್ದಾರೆ.
Advertisement
Advertisement
ಕಳೆದ ಒಂದು ತಿಂಗಳಿನಿಂದ ಈ ಗ್ರಾಮದ ಹೊರವಲಯದಲ್ಲಿನ ಜಮೀನಿನಲ್ಲಿರುವ ಭೂಮಿ ದೊಡ್ಡ ಪ್ರಮಾಣದಲ್ಲಿ ಕುಸಿಯಲಾರಂಭಿಸಿದೆ. ಕುಳ್ಳೂರನಿಂದ ಬಿಚಗುತ್ತಿ ತಿಮ್ಮಾಪುರ್ ಸೇರಿ ನಾಲ್ಕು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲೂ ಕೂಡ ಭೂಮಿ ಕುಸಿದಿದ್ದು ಸುರಂಗದಂತಾಗಿ ಇಲ್ಲಿ ಮಾರ್ಪಟ್ಟಿದೆ. ಈ ಕಾರಣಕ್ಕೆ ರಸ್ತೆಯಲ್ಲಿ ಕಲ್ಲಿಟ್ಟು ಎಚ್ಚರಿಕೆ ಬೋರ್ಡ್ ಕೂಡ ಹಾಕಿ ಜನರನ್ನ ಆ ಕಡೆ ಓಡಾಡದಂತೆ ಸ್ಥಳೀಯರು ನೋಡಿಕೊಳ್ಳುತ್ತಿದ್ದಾರೆ.
Advertisement
Advertisement
ಆರು ತಿಂಗಳ ಹಿಂದೆಯೇ ಸ್ವಲ್ಪ ಪ್ರಮಾಣದಲ್ಲಿ ಬಿರುಕು ಬಿಟ್ಟಿದ್ದ ಭೂಮಿ ಈಗ ಏಕಾಏಕಿ ಕುಸಿಯುತ್ತಿರುವುದರಿಂದ ಗ್ರಾಮಸ್ಥರು ಆ ಕಡೆ ಸುಳಿಯುವುದನ್ನೇ ಬಿಟ್ಟಿದ್ದಾರೆ. ಸುಮಾರು ಎರಡು ಕಿ.ಮೀ ನಷ್ಟು ಭೂಮಿ ಕುಸಿದಿದ್ದು ನಿತ್ಯವೂ ಇದರ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತಿದೆ. ಈ ಕುರಿತು ರಾಮದುರ್ಗ ತಹಶೀಲ್ದಾರರ ಗಮನಕ್ಕೆ ತಂದರೆ ಅದು ನನಗೆ ಸಂಬಂಧ ಇಲ್ಲ. ಬೇಕಾದರೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಹೇಳಿ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ.