ಸಾಂದರ್ಭಿಕ ಚಿತ್ರ
ಡೆಹ್ರಾಡೂನ್: ಚಿರತೆ ಬಾಲಕನನ್ನು ಎಳೆದುಕೊಂಡು ಹೋಗಿದ್ದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಕಾಡಿಗೆ ಬೆಂಕಿ ಇಟ್ಟ ಘಟನೆ ಉತ್ತರಾಖಂಡ್‍ನ ಬಗೇಶ್ವರ ಜಿಲ್ಲೆಯ ಹರಿನಗರ ಗ್ರಾಮದಲ್ಲಿ ನಡೆದಿದೆ.
Advertisement
ಸೋಮವಾರ ಸಂಜೆ ಗ್ರಾಮದ ಮೇಲೆ ದಾಳಿ ನಡೆಸಿದ ಚಿರತೆ ಬಾಲಕನನ್ನು ಎಳೆದು ಕೊಂಡು ಹೋಗಿತ್ತು. ಚಿರತೆ ಎಳೆದುಕೊಂಡು ಹೋಗಿದ್ದಕ್ಕೆ ಗ್ರಾಮಸ್ಥರು ರೊಚ್ಚಿಗೆದ್ದು ಅರಣ್ಯಕ್ಕೆ ಬೆಂಕಿ ಹಚ್ಚಿದ್ದಾರೆ. ಮಂಗಳವಾರ ಬೆಳಗ್ಗೆ ಅರಣ್ಯ ಪ್ರದೇಶದ ಸಮೀಪ ಕಚ್ಚಿ ತಿಂದಿರುವ ಬಾಲಕನ ಮೃತದೇಹ ಪತ್ತೆಯಾಗಿತ್ತು.
Advertisement
ದೀಪಕ್(7) ದಾಳಿಗೊಳಗಾಗಿ ಮೃತಪಟ್ಟ ಬಾಲಕ. ಹರಿನಗರ ಗ್ರಾಮದ ದೀವಾನ್ ರಾಮ್‍ರ ಮಗನಾಗಿದ್ದು, ಸೋಮವಾರ ಸಂಜೆ ಮನೆಯ ಬಳಿ ಚಿರತೆಯೊಂದು ದಾಳಿ ನಡೆಸಿತ್ತು. ಈ ವೇಳೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ತಾಯಿಯು ಮಗುವಿನ ಚೀರಾಟ ಕೇಳಿ ಹೊರಬಂದು ನೋಡಿದಾಗ ಚಿರತೆ ಮಗುವನ್ನು ಕಾಡಿನ ಕಡೆಗೆ ಎಳೆದೊಯ್ದಿದೆ. ಕೂಡಲೇ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಗ್ರಾಮಸ್ಥರು ರೊಚ್ಚಿಗೆದ್ದು ಅರಣ್ಯಕ್ಕೆ ಬೆಂಕಿ ಹಚ್ಚಿದ್ದಾರೆ.
Advertisement
Advertisement
ಬಾಲಕನ ಶವ ಸಿಕ್ಕ ಹಿನ್ನೆಲೆ ಗ್ರಾಮಸ್ಥರು ಒಟ್ಟುಗೂಡಿ ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಚಿರತೆಯನ್ನು ಕೊಲ್ಲಬೇಕೆಂದು ಪಟ್ಟುಹಿಡಿದಿದ್ದಾರೆ ಎಂದು ಪ್ರಾದೇಶಿಕ ಅರಣ್ಯ ಅಧಿಕಾರಿ ಆರ್ ಕೆ ಸಿಂಗ್ ತಿಳಿಸಿದ್ದಾರೆ.
ಈ ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಒಟ್ಟು 8-9 ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದ್ದು, ಚಿರತೆಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗುತ್ತದೆ. ದೀಪಕ್ ಕುಟುಂಬಕ್ಕೆ ರೂ.3ಲಕ್ಷ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದಾರೆ.
ಚಿರತೆ ದಾಳಿಯು ಇದೇ ಮೊದಲಲ್ಲ ಕಳೆದ ಮಾರ್ಚ್ ತಿಂಗಳಲ್ಲಿ ಇದೇ ಚಿರತೆ ದಾಳಿ ಮಾಡಿ 4 ವರ್ಷದ ಮಗುವನ್ನು ಕೊಂದಿತ್ತು. ಒಟ್ಟು 2 ಮಕ್ಕಳನ್ನು ಕೊಂದು ಹಾಕಿದ ಚಿರತೆಯನ್ನು ನರಹಂತಕ ಚಿರತೆಯೆಂದು ಘೋಷಣೆ ಮಾಡುವಂತೆ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗೆ ಅನುಮತಿ ಕೇಳಿದ್ದೇವೆ ಎಂದು ಹೇಳಿದರು.
ಚಿರತೆ ದಾಳಿಯಿಂದ ಇಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅರಣ್ಯ ಸಂರಕ್ಷಣಾ ಅಧಿಕಾರಿಯಾದ ಡಿವಿಎಸ್ ಖಾಟಿಯವರು ಕೂಡಲೇ ಚಿರತೆಯನ್ನು ಕೊಲ್ಲುವಂತೆ ಆದೇಶ ನೀಡಿದ್ದಾರೆ. ಅಲ್ಮೋರದಿಂದ ಶೂಟರ್ಸ್ ತಂಡವು ಆದಷ್ಟು ಬೇಗ ಬಗೇಶ್ವರ್ ತಲುಪಿ ಹಂತಕ ಚಿರತೆಯನ್ನು ಗುಂಡಿಟ್ಟು ಕೊಲ್ಲುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.