ರಕ್ಷಾಬಂಧನಕ್ಕೆ ಹುತಾತ್ಮ ಯೋಧನ ಪತ್ನಿಗೆ ಗ್ರಾಮಸ್ಥರಿಂದ 11 ಲಕ್ಷದ ಮನೆ ಗಿಫ್ಟ್

Public TV
2 Min Read
soldier wife

ಭೋಪಾಲ್: ರಕ್ಷಾ ಬಂಧನ ಹಬ್ಬದಲ್ಲಿ ರಾಖಿ ಕಟ್ಟಿದ ಸಹೋದರಿಯರಿಗೆ ಸಹೋದರರು ಉಡುಗೊರೆ ಕೊಡುವುದು ಪದ್ಧತಿ. ಅದೇ ರೀತಿ ಮಧ್ಯಪ್ರದೇಶದಲ್ಲಿ ತಮಗೆ ರಾಖಿ ಕಟ್ಟಿದ ಹುತಾತ್ಮ ಯೋಧನ ಪತ್ನಿಗೆ ಊರಿನವರು ಸೇರಿ ಸರ್ಪ್ರೈಸ್ ಗಿಫ್ಟ್ ಕೊಟ್ಟು ಹಬ್ಬ ಆಚರಿಸಿದ್ದಾರೆ.

ಹೌದು. ಮಧ್ಯಪ್ರದೇಶದ ದೆಪಲ್ಪುರ ಜಿಲ್ಲೆಯ ಪಿರ್ ಪಿಪ್ಲಿಯ ಗ್ರಾಮದ ಹುತಾತ್ಮ ಯೋಧ ಹವಾಲ್ದಾರ್ ಮೋಹನ್ ಸಿಂಗ್ ಕುಟುಂಬಕ್ಕೆ ಗ್ರಾಮಸ್ಥರು ಮನೆ ಕಟ್ಟಿಸಿಕೊಟ್ಟಿದ್ದಾರೆ. ಈ ಮನೆಯನ್ನು ಯೋಧನ ಪತ್ನಿ ರಾಜು ಬಾಯಿ ಅವರಿಗೆ ಗ್ರಾಮಸ್ಥರು ರಕ್ಷಾಬಂಧನ ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೆ ಗ್ರಾಮಸ್ಥರು ನೆಲದ ಮೇಲೆ ತಮ್ಮ ಕೈಗಳನ್ನು ಇಟ್ಟು ಅದರ ಮೇಲೆ ರಾಜು ಬಾಯಿ ಅವರನ್ನು ನಡೆಸಿ, ಮನೆಯೊಳಗೆ ಕಳುಹಿಸಿ ಗೌರವ ಸಲ್ಲಿಸಿದ್ದಾರೆ.

soldier wife 1

1992ರಲ್ಲಿ ದಕ್ಷಿಣ ತ್ರಿಪುರ ಜಿಲ್ಲೆಯ ದಳಪತಿಪುರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೋಹನ್ ಸಿಂಗ್ ಹುತಾತ್ಮರಾಗಿದ್ದರು. ಅಂದಿನಿಂದ ಮೋಹನ್ ಸಿಂಗ್ ಅವರ ಪತ್ನಿ ರಾಜು ಬಾಯಿ, ಇಬ್ಬರು ಮಕ್ಕಳು ಮುರಿದ ಗುಡಿಸಲಿನಲ್ಲಿಯೇ ಜೀವನ ನಡೆಸುತ್ತಿದ್ದರು. ಸರ್ಕಾರ ಕೂಡ ಅವರ ನೆರವಿಗೆ ಬಂದಿರಲಿಲ್ಲ. ಸರ್ಕಾರದಿಂದ ಬರುತ್ತಿದ್ದ ಕೇವಲ 700 ರೂ. ಮಾಸಿಕ ಪಿಂಚಣಿಯಲ್ಲಿ ಮೋಹನ್ ಸಿಂಗ್ ಕುಟುಂಬ ಜೀವನ ನಡೆಸಬೇಕಾಗಿತ್ತು. ಇದನ್ನು ಕಂಡ ಗ್ರಾಮಸ್ಥರು ಯೋಧನ ಕುಟುಂಬಕ್ಕೆ ನೆರವಾಗಲು ನಿರ್ಧರಿಸಿ, ಬರೋಬ್ಬರಿ 11 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ರಕ್ಷಾಬಂಧನದ ಶುಭದಿನದಂದು ಉಡುಗೊರೆಯಾಗಿ ಯೋಧನ ಪತ್ನಿಗೆ ನೀಡಿದ್ದಾರೆ.

ಮೋಹನ್ ಸಿಂಗ್ ಹುತಾತ್ಮರಾಗಿ 3 ದಶಕಗಳಾಗುತ್ತಾ ಬಂದರೂ ಸರ್ಕಾರ ಮಾತ್ರ ಅವರ ಕುಟುಂಬಕ್ಕೆ ಯಾವುದೇ ರೀತಿಯ ಸಹಾಯ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಪಿಪ್ಲಿಯ ಗ್ರಾಮಸ್ಥರು ಸೇರಿಕೊಂಡು ತಮ್ಮ ಗ್ರಾಮದಲ್ಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ದೇಣಿಗೆ ಸಂಗ್ರಹಿಸಿ ಮೋಹನ್ ಸಿಂಗ್ ಕುಟುಂಬಕ್ಕೆ ಮನೆಯನ್ನು ಕಟ್ಟಿಕೊಡಲು ಮುಂದಾದರು. ಮುರುಕಲು ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕಾಗಿ ದೇಣಿಗೆ ಹಣದಲ್ಲಿ ಕಾಂಕ್ರೀಟ್ ಮನೆ ಕಟ್ಟಿಸಿದರು.

ಆ ಮನೆಯನ್ನು ಗುರುವಾರ ರಾಜು ಬಾಯಿ ಅವರಿಗೆ ಊರಿನವರು ಗಿಫ್ಟ್ ಆಗಿ ನೀಡಿದ್ದಾರೆ. ರಕ್ಷಾಬಂಧನ ಹಬ್ಬವಿದ್ದ ಕಾರಣಕ್ಕೆ ತನ್ನೂರಿನ ಎಲ್ಲಾ ಯುವಕರಿಗೂ ರಾಜು ಬಾಯಿ ಅವರು ರಾಖಿ ಕಟ್ಟಿ ಹೊಸ ಮನೆಯೊಳಗೆ ಪ್ರವೇಶಿಸಿ ಹಬ್ಬ ಆಚರಿಸಿದ್ದಾರೆ.

ದೇಶಕ್ಕಾಗಿ ಬಲಿದಾನ ಮಾಡಿದ ಹುತಾತ್ಮ ಯೋಧ ಮೋಹನ್ ಸಿಂಗ್ ಅವರ ಪ್ರತಿಮೆಯನ್ನು ಗ್ರಾಮದಲ್ಲಿ ನಿರ್ಮಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಯೋಧನ ಬಲಿದಾನಕ್ಕೆ ಸರ್ಕಾರ ಯಾವುದೇ ಗೌರವ ನೀಡದೇ ಇದ್ದರೂ ಗ್ರಾಮಸ್ಥರು ಸೇರಿಕೊಂಡು ಊರಿನ ಮುಖ್ಯರಸ್ತೆಯಲ್ಲಿ ಪ್ರತಿಮೆ ನಿರ್ಮಿಸಲು ಮುಂದಾಗಿದ್ದಾರೆ. ಈ ಮೂಲಕ ಹುತಾತ್ಮ ಯೋಧನಿಗೆ ಗೌರವ ಸಲ್ಲಿಸುವುದಾಗಿ ಗ್ರಾಮಸ್ಥರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *