ಬೆಳಗಾವಿ: ತಲೆಯ ಮೇಲೊಂದು, ಸೊಂಟದ ಮೇಲೊಂದು ಕೊಡ ಹೊತ್ತು ಕಿಲೋಮೀಟರ್ ಗಟ್ಟಲೆ ಗುಡ್ಡ ಹತ್ತಿ ಇಳೀದು ನೀರು ತರುವ ತುಂಬು ಗರ್ಭಿಣಿ, ಶಾಲಾ ಮಕ್ಕಳು ಹಾಗೂ ಮಹಿಳೆಯರು ಪರದಾಟ ನಡೆಸುತ್ತಿರೋ ಮನಕಲಕುವ ದೃಶ್ಯ ಜಿಲ್ಲೆಯ ರಾಮದುರ್ಗ ತಾಲೂಕಿನ ಬುದ್ನಿಖುರ್ದ ಗ್ರಾಮದಲ್ಲಿ ಕಂಡುಬಂದಿದೆ.
ಹೌದು. ಹಲವು ವರ್ಷಗಳಿಂದಲೂ ಬುದ್ನಿಖುರ್ದ ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ. ಆದ್ರೆ ಈ ಸಮಸ್ಯೆಯನ್ನು ಮಾತ್ರ ಯಾರಿಂದಲೂ ಬಗೆಹರಿಸಲು ಸಾಧ್ಯವಾಗಿಲ್ಲ. ಈ ಗ್ರಾಮದಲ್ಲಿರೋ ಒಂದು ಬೋರ್ ವೆಲ್ ನೀರಿನಿಂದಲೇ ಇಡೀ ಗ್ರಾಮದ ಜನ ನೀರು ಕುಡಿಯುತ್ತಿದ್ದಾರೆ. ಸುಮಾರು ಐದು ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ನೀರು ಹೊತ್ತು ತರುವುದೇ ಒಂದು ದೊಡ್ಡ ಕೆಲಸವಾಗಿಬಿಟ್ಟಿದೆ. ನಿತ್ಯವೂ ಎರಡು ಕಿ.ಮೀ ನಡೆದುಕೊಂಡು ಹೋಗಿಯೇ ನೀರು ತರುವ ಸ್ಥಿತಿ ಇಲ್ಲಿದೆ. ಒಂದೆಡೆ ಪುರುಷರು ಕೂಲಿ ಮಾಡಲು ಹೋದರೆ, ಮತ್ತೊಂದೆಡೆ ಮಹಿಳೆಯರು ಹಾಗೂ ಮಕ್ಕಳು ನೀರು ತುಂಬುವ ಕೆಲಸ ಮಾಡುತ್ತಾರೆ.
Advertisement
Advertisement
ವಿಪರ್ಯಾಸ ಅಂದ್ರೆ ಗರ್ಭಿಣಿ ಮಹಿಳೆಯರು ಕೂಡ ಎರಡು ಕಿ.ಮೀ ನಡೆದುಕೊಂಡು ಹೋಗಿ ನೀರು ತರುತ್ತಾರೆ. ರಸ್ತೆಗಳು ಕೂಡ ಸರಿಯಿಲ್ಲದ ಕಾರಣ ಈ ಗ್ರಾಮದಲ್ಲಿ ಒಂದು ಕಿ.ಮೀ ನಷ್ಟು ಗುಡ್ಡವನ್ನ ಹತ್ತಿ ನೀರು ತರುವುದರಿಂದ ಮಹಿಳೆಯರು ಹೊಟ್ಟೆನೋವು ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅದರಲ್ಲೂ ಗರ್ಭಿಣಿ ಮಹಿಳೆಯರು ಕೆಲವೊಮ್ಮೆ ಬಿದ್ದು ಆಸ್ಪತ್ರೆಗಳಲ್ಲಿ ದಾಖಲಾದ ಪ್ರಕರಣಗಳು ಕೂಡ ನಡೆದಿದೆ.
Advertisement
Advertisement
ಈ ಗ್ರಾಮದಲ್ಲಿ ನೀರಿನ ಸಮಸ್ಯೆ ಎಷ್ಟರ ಮಟ್ಟಿಗೆ ಇದೆ ಅಂದರೆ, ಪುಟ್ಟ ಪುಟ್ಟ ಮಕ್ಕಳು ಕೂಡ ನೀರಿಗಾಗಿ ಕೆಲವೊಮ್ಮೆ ಶಾಲೆಯನ್ನ ಬಿಟ್ಟು ನೀರು ತುಂಬುತ್ತಾರೆ. ಇತ್ತ ನೀರಿನ ಸಮಸ್ಯೆ ಇದ್ದುದರಿಂದ ದನಕರುಗಳನ್ನ ಸಾಕುವುದನ್ನು ಕೂಡ ಗ್ರಾಮಸ್ಥರು ಬಹುತೇಕವಾಗಿ ನಿಲ್ಲಿಸಿದ್ದಾರೆ. ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ ಗ್ರಾಮದ ಎಲ್ಲಾ ಜನರು ನಿತ್ಯವೂ ಕಿ.ಮೀ ಗಟ್ಟಲೇ ನಡೆದುಕೊಂಡು ಹೋಗಿ ನೀರು ತರುವ ಸ್ಥಿತಿ ಇದ್ದು, ಇದನ್ನ ಪರಿಹರಿಸಿ ಎಂದು ಹಲವು ಬಾರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಓ ಗೆ ಮನವಿ ಮಾಡಿಕೊಂಡ್ರೂ ಯಾವುದೇ ಪ್ರಯೋಜನ ಆಗಿಲ್ಲ. ಅಲ್ಲದೆ ಸ್ಥಳೀಯ ಶಾಸಕರಂತೂ ಬರೀ ಚುನಾವಣೆ ಬಂದಾಗ ಮಾತ್ರ ಗ್ರಾಮಕ್ಕೆ ಬರ್ತಾರೆ ಚುನಾವಣೆ ಮುಗಿದ ಮೇಲೆ ಇತ್ತ ಸುಳಿಯುವುದೇ ಇಲ್ಲ. ಹೀಗಾಗಿ ಈ ಬಾರಿ ವೋಟ್ ಕೇಳೊಕೆ ಬಂದರೇ ಅವರನ್ನ ಸುಮ್ಮನೆ ಬಿಡುವುದಿಲ್ಲ ಎಂದು ಗ್ರಾಮಸ್ಥರು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಯಾವುದೇ ಪ್ರಯೋಜನ ಆಗ್ತಿಲ್ಲ. ವಿದ್ಯುತ್ ಕಡಿತಗೊಂಡರೇ ಕೆಲವೊಮ್ಮೆ ಕೆರೆ ನೀರು ಕುಡಿದು ಕಾಯಿಲೆಯಿಂದ ಗ್ರಾಮಸ್ಥರು ಬಳಲುತ್ತಿದ್ದಾರೆ. ಸದ್ಯ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಬೆನ್ನಲ್ಲೆ ಜನನಾಯಕರ ವಿರುದ್ಧ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಮತ ಕೇಳಲು ಹೋಗುವ ಮುಖಂಡರಿಗೆ ಸರಿಯಾಗಿ ಉತ್ತರಿಸಲು ಜನರು ತಯಾರಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv