ಮಳೆ ಬಂದ್ರೆ ರಸ್ತೆಯೆಲ್ಲಾ ಕೆಸರು ಮುದ್ದೆ-ಹಸಿದ ಶಾಲಾ ಮಕ್ಕಳಿಗೆ ಸಿಗಲ್ಲ ಬಿಸಿಯೂಟ

Public TV
1 Min Read
dwd school

ಧಾರವಾಡ: ಜಿಲ್ಲೆಯ ಅಳ್ನಾವರ ತಾಲೂಕಿನ ಧೋಪೇನಟ್ಟಿ ಗ್ರಾಮದಲ್ಲಿ ಮಳೆ ಬಂದರೆ ರಸ್ತೆಯೆಲ್ಲಾ ಕೆಸರು ಮುದ್ದೆಯಾಗುತ್ತದೆ. ಹೀಗಾಗಿ ಶಾಲಾ ಮಕ್ಕಳಿಗೆ ಬಿಸಿಯೂಟವನ್ನು ಬೈಕ್‍ನಲ್ಲಿ ಹೊತ್ತು ತರಬೇಕು. ಒಂದು ವೇಳೆ ಬೈಕ್ ಸಾಗದಷ್ಟು ರಸ್ತೆ ಕೆಸರುಮಯವಾದರೆ ಆ ದಿನ ಮಕ್ಕಳಿಗೆ ಬಿಸಿಯೂಟವಿಲ್ಲ.

ಗ್ರಾಮಕ್ಕೆ ಬಿಸಿಯೂಟ ಮುಟ್ಟಬೇಕಾದರೆ ಸಾಹಸ ಪಡಬೇಕು, ಬಿಸಿಯೂಟದ ಪಾತ್ರೆಗಳನ್ನ ಬೈಕ್ ಮೇಲೆನೇ ಇಟ್ಟುಕೊಂಡು ಹೋಗಬೇಕು. ಹೀಗಾಗಿ ಗ್ರಾಮಸ್ಥರು ತಮ್ಮ ಗ್ರಾಮದ ಶಾಲಾ ಮಕ್ಕಳಿಗೆ ಈ ಊಟ ಮುಟ್ಟಿಸಲು ಓರ್ವ ಬೈಕ್ ಸವಾರನನ್ನೇ ನೇಮಕ ಮಾಡಿದ್ದಾರೆ. ಆ ಸವಾರ ಬೈಕ್‍ಗೆ ದಬ್ಬೆ ಕಟ್ಟಿಕೊಂಡು, ಬಿಸಿಯೂಟದ ಡಬ್ಬಿಗಳನ್ನು ಕಟ್ಟಿಕೊಂಡು ರಸ್ತೆಯಲ್ಲಿ ಸರ್ಕಸ್ ಮಾಡಿಕೊಂಡು ಹೇಗೋ ಮಕ್ಕಳಿಗೆ ಬಿಸಿಯೂಟ ತಲುಪಿಸುತ್ತಾರೆ

dwd school 1

ಧೋಪೇನಟ್ಟಿ ಗ್ರಾಮದಲ್ಲಿ ಸರ್ಕಾರಿ ಶಾಲೆಗೆ ಬಿಸಿಯೂಟ ತಲುಪಿಸಲು ನಿತ್ಯವೂ ಸರ್ಕಸ್ ಮಾಡಬೇಕು. ಮಳೆ ಬಂತು ಅಂದರೆ ಈ ಶಾಲೆಯಲ್ಲಿ ಓದುವ ಒಟ್ಟು 22 ಮಕ್ಕಳಿಗೆ ಈ ಬಿಸಿಯೂಟನೂ ಸಿಗಲ್ಲ. ಯಾಕೆಂದರೆ ಮಳೆಗೆ ರಸ್ತೆ ಹದಗೆಟ್ಟಿರುತ್ತದೆ. ಡೋರಿ ಗ್ರಾಮದವರೆಗೆ ಮಾತ್ರ ರಸ್ತೆ ಚೆನ್ನಾಗಿದ್ದು, ಮುಂದಕ್ಕೆ ಧೋಪೇನಟ್ಟಿ ಗ್ರಾಮದ ದಾರಿ ಹದಗೆಟ್ಟಿದೆ. ಇದರಿಂದ ಬೈಕ್ ಸಹ ಸಂಚರಿಸಲು ಕೂಡ ಆಗಲ್ಲ. ಆದರೂ ಗ್ರಾಮದ ಯುವಕನೋರ್ವ ಡೋರಿಯಿಂದ ಧೋಪೇನಟ್ಟಿಗೆ ಬಿಸಿಯೂಟ ತಲುಪಿಸುತ್ತಾರೆ.

ಕಳೆದ ನಾಲ್ಕು ವರ್ಷಗಳಿಂದ ಧೋಪೇನಟ್ಟಿ ಶಾಲಾ ಮಕ್ಕಳಿಗೆ ಬೈಕ್ ಮೇಲೆ ಬಿಸಿಯೂಟ, ಹಾಲು ತಲುಪುತ್ತಿದೆ. ಈ ಸಮಸ್ಯೆ ಬಗ್ಗೆ ಬಿಜೆಪಿ ಶಾಸಕ ಸಿ.ಎಂ ನಿಂಬಣ್ಣವರ್ ಗೆ ತಿಳಿಸಿದರೂ ಯಾವುದೇ ಉಪಯೋಗ ಆಗಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.

dwd school 2

ಗ್ರಾಮಕ್ಕೆ ಬಸ್ ಸಂಪರ್ಕ ಇಲ್ಲದಿದ್ದರೂ ಪರವಾಗಿಲ್ಲ, ಶಾಲಾ ಮಕ್ಕಳು ಹಸಿದುಕೊಂಡು ಇರಬಾರದು ಎಂದು ಗ್ರಾಮದ ನಿವಾಸಿ ಸಂತೋಷ್ ಬೈಕ್ ಮೇಲೆ ಬಿಸಿಯೂಟ ತಂದು ಮೆಚ್ಚುಗೆಯ ಕೆಲಸ ಮಾಡುತ್ತಿದ್ದಾರೆ. ಸಂತೋಷ್‍ರನ್ನು ನೋಡಿಯಾದರೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *