– ಈ ಕುಟುಂಬಕ್ಕೆ ಊರ ಜಾತ್ರೆಗೂ ನೋ ಎಂಟ್ರಿ
ಬೆಳಗಾವಿ/ಬೆಂಗಳೂರು: ಪುಲ್ವಾಮ ದಾಳಿ ನಡೆದಾಗ ಅದೆಷ್ಟೋ ಮಂದಿ ಕಣ್ಣೀರು ಹಾಕಿದ್ದರು. ಯೋಧರ ಛಿದ್ರ ಛಿದ್ರವಾದ ದೇಹಗಳನ್ನು ನೋಡಿ ಮನಸ್ಸು ವಿಲ ವಿಲ ಅಂದಿತ್ತು. ಮೊಂಬತ್ತಿಯ ಮಂದಬೆಳಕಿನಲ್ಲಿ ಮೌನವೇ ಮಾತಾಗಿತ್ತು. ಆದರೆ ಕರುನಾಡಿನ ಹೆಮ್ಮೆಯ ಯೋಧರೊಬ್ಬರ ಕುಟುಂಬಸ್ಥರಿಗೆ ಸಾಮಾಜಿಕ ಬಹಿಷ್ಕಾರ ಹಾಕಿ, ಅವರ ಜೊತೆ ಯಾರಾದರೂ ಮಾತನಾಡಿದರೆ ಐದು ಸಾವಿರ ದಂಡ ವಿಧಿಸುವ ನೀಚ ಘಟನೆ ಬೆಳಗಾವಿಯಲ್ಲಿ ನಡೆದಿದೆ.
Advertisement
ಬೆಳಗಾವಿಯ ರಾಮದುರ್ಗದ ತೋಟಗಿಟ್ಟಿ ಗ್ರಾಮಸ್ಥರು ಯೋಧ ವಿಠಲ್ ಕಡಕೋಳ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಹೀಗಾಗಿ ಈ ಕುಟುಂಬದ ಜೊತೆ ಯಾರಾದರೂ ಮಾತನಾಡಿದರೆ ಅವರಿಗೆ ಐದು ಸಾವಿರ ದಂಡ ವಿಧಿಸಲಾಗುತ್ತೆ. ಜೊತೆಗೆ ಯೋಧನ ಕುಟುಂಬಕ್ಕೆ ಯಾರೋಬ್ಬರ ಮನೆಯಲ್ಲೂ ನೀರು ಸಿಗಲ್ಲ, ಊರಿನ ಜಾತ್ರೆ, ದೇಗುಲಕ್ಕೆ ಕೂಡ ಯೋಧನ ಕುಟುಂಬದವರಿಗೆ ಪ್ರವೇಶ ನಿಷೇಧಿಸಲಾಗಿದೆ.
Advertisement
Advertisement
ಒಂದು ಜಾಗದ ವಿಚಾರಕ್ಕೆ ಪ್ರಾಣದ ಹಂಗು ತೊರೆದು ದೇಶಕ್ಕಾಗಿ ದುಡಿಯುವ ಯೋಧ ವಿಠಲ್ ಹಾಗೂ ಅವರ ಕುಟುಂಬಕ್ಕೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ. ವಿಠಲ್ ಅವರ ತಂದೆಗೆ ಸೇರಿದ ಜಾಗವನ್ನು ಕಬಳಿಸಿ, ಅಲ್ಲಿ ಅಂಗನವಾಡಿ ನಿರ್ಮಿಸೋಕೆ ಕೆಲ ಊರಿನ ಮುಖಂಡರು ಮುಂದಾಗಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದನ್ನೇ ದೊಡ್ಡದು ಮಾಡಿಕೊಂಡ ಊರವರು ಇದೊಂದು ಯೋಧನ ಕುಟುಂಬ ಎನ್ನುವ ಗೌರವ ಮರೆತು, ಕನಿಷ್ಠ ಪಕ್ಷ ಮಾನವೀಯತೆಯನ್ನು ಮರೆತು ಕಳೆದ ಮೂರು ವರ್ಷದಿಂದ ಈ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ.
Advertisement
ಅಷ್ಟೇ ಅಲ್ಲದೇ ಈಗ ವಿಠಲ್ ಹಾಗೂ ಅವರ ಅಣ್ಣನಿಗೆ ಮುಂದಿನ ತಿಂಗಳು ಮದುವೆ ನಿಗದಿ ಆಗಿದೆ. ಮದುವೆ ಶಾಸ್ತ್ರಕ್ಕೆ ಈ ಊರಿನ ಪೂಜಾರಿಯನ್ನೇ ಕರೆಯಬೇಕು ಎನ್ನುವುದು ಇಲ್ಲಿನ ಸಂಪ್ರದಾಯ. ಅವರನ್ನು ಬಿಟ್ಟು ಯಾರನ್ನೂ ಕರೆಯುವಂತಿಲ್ಲ. ಆ ಪೂಜಾರಿ ಬಾರದೇ ಇದ್ದರೆ ಮದುವೆ ಸಂಪ್ರದಾಯ ನಡೆಯೋದು ಕಷ್ಟ. ಆದರೆ ಗ್ರಾಮಸ್ಥರು ಈ ಕುಟುಂಬದ ಮೇಲೆ ಎಷ್ಟರ ಮಟ್ಟಿಗೆ ದ್ವೇಷ ಸಾಧಿಸುತ್ತಿದ್ದಾರೆ ಎಂದರೆ ಯೋಧನ ಮದುವೆ ಮಾಡಿಸೋಕೆ ಪೂಜಾರಿಗೂ ದಿಗ್ಭಂಧನ ಹಾಕಿದ್ದಾರೆ. ಯೋಧನ ಮದ್ವೆಗೆ ನಾನು ಬರೋದೇ ಇಲ್ಲ, ಇದು ದೈವ ನಿರ್ಣಯ ನಾನು ಮದುವೆ ಮಾಡಿಸಲ್ಲ ಅಂತ ಪೂಜಾರಿ ಹಠ ಹಿಡಿದು ಕುಳಿತಿದ್ದಾರೆ. ಅಯ್ಯೋ ಇಡೀ ಊರವರು ಬೇಡ ಅಂತಾರೆ ನಾನ್ಯಾಕೆ ಊರವರನ್ನು ಎದುರು ಹಾಕಿಕೊಂಡು ಬಾಳಲಿ ಎಂದು ಪೂಜಾರಿ ಹೇಳುತ್ತಿದ್ದಾರೆ.
ಇದರಿಂದ ಯೋಧ ವಿಠಲ್ ಹಾಗೂ ಕುಟುಂಬಸ್ಥರು ಮನೆಯಲ್ಲಿ ನಡೆಯಬೇಕಿದ್ದ ಮದುವೆಯನ್ನು ಕೂಡ ಮುಂದೂಡುವ ಪರಿಸ್ಥಿತಿಗೆ ಬಂದಿದ್ದಾರೆ. ದೇಶ ಕಾಯುವ ಯೋಧನಿಗೆ ಶತ್ರುಗಳ ಕಾಟಕ್ಕಿಂತ ಈಗ ನೆರೆಹೊರೆಯವರ ಕಾಟವೇ ಹೆಚ್ಚಾಗಿ ಬದುಕೇ ಸಾಕಾಗಿದೆ ಎನ್ನುವ ನೋವು ತುಂಬಿದೆ.
ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ವಿಠಲ್ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ನಾನು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನಮ್ಮ ಮನೆ ಮುಂದೆ ಒಂದು 30*40 ಜಾಗ ಇದೆ. ಹೊಲದಲ್ಲೂ ಮನೆ ಕಟ್ಟಿದ್ದೀವಿ. ಆ ಜಾಗವನ್ನು ಅಂಗನವಾಡಿಗೆ ತಗೋಳ್ತೀವಿ, ಸರ್ಕಾರಿ ಜಾಗ ಅಂತ ಹೇಳಿ ಒತ್ತಾಯವಾಗಿ ತಗೊಳೋಕೆ ಗ್ರಾಮದ ಕೆಲವರು ಪ್ರಯತ್ನಿಸಿದರು. ಎಲ್ಲಾ ನಮ್ಮ ಅಪ್ಪನ ಹೆಸರಲ್ಲೇ ದಾಖಲೆಗಳು ಇದೆ. ಡಿಸಿ ಅವರಿಗೂ ಈ ಬಗ್ಗೆ ಕಂಪ್ಲೆಂಟ್ ಕೊಟ್ಟಿದ್ದೆವು. ಯಾರು ಏನೂ ಮಾಡಲಿಲ್ಲ. ನಾನು ತುರ್ತು ರಜೆ ಹಾಕಿ ಬಂದು ಡಿಸಿಗೆ ಕೇಳಿದೆ, ಇವೆಲ್ಲಾ ನಾರ್ಮಲ್, ಊರಲ್ಲಿ ಇದೆಲ್ಲಾ ಇದ್ದೀದ್ದೆ ಅಂತ ಹೇಳಿ ಕಳುಹಿಸಿದರು. ಆದರೆ ಜಾಗ ಕೊಟ್ಟಿಲ್ಲ ಅಂತ ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಯಾರು ನಮ್ಮ ಬಳಿ ಮಾತಾಡೊ ಹಂಗಿಲ್ಲ, ಮಾತಾಡಿದರೆ ಅವರಿಗೆ 5 ಸಾವಿರ ದಂಡ, ಯಾವುದೇ ಕಾರ್ಯಕ್ರಮ ಇದ್ದರೂ ನಮ್ಮ ಜನ ಕರೆಯೋ ಹಂಗಿಲ್ಲ ಎಂದು ಕಷ್ಟವನ್ನು ಹೇಳಿಕೊಂಡರು.
ಯೋಧನ ಕುಟುಂಬ ಕಳೆದ ಮೂರು ವರ್ಷದಿಂದ ನರಕ ನೋಡುತ್ತಿದ್ದರೂ, ಇಂತಹ ಬಹಿಷ್ಕಾರದಂತಹ ಅನಿಷ್ಠ ಪದ್ಧತಿ ನಡೆಯುತ್ತಿದ್ದರೂ ಬೆಳಗಾವಿ ಜಿಲ್ಲಾಡಳಿತ ಮಾತ್ರ ಮೌನವಾಗಿದೆ. ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ, ಬೆಳಗಾವಿಯ ರಾಜಕೀಯ ಶೂರರ ಮನಸ್ಸುಗಳು, ಈ ಯೋಧನ ಕುಟುಂಬದ ಪರ ನಿಲ್ಲುತ್ತಾ? ಅವರ ಕುಟುಂಬವನ್ನು ಬಹಿಷ್ಕಾರದ ಶಿಕ್ಷೆಯಿಂದ ಪಾರು ಮಾಡುತ್ತಾರಾ? ಇಲ್ಲವೋ ಎನ್ನುವುದನ್ನ ಕಾದು ನೋಡಬೇಕಿದೆ.