– ಪಂಪ್ ಮೂಲಕ ಮೂರು ದಿನಗಳಿಂದ ನಡೆಯುತ್ತಿದೆ ಹೊರ ಹಾಕೋ ಕೆಲಸ
– ಜನರ ಆಗ್ರಹಕ್ಕೆ ಮಣಿದು ಪಂಚಾಯತ್‍ನಿಂದ ನಿರ್ಧಾರ
ಧಾರವಾಡ: ಎಚ್‍ಐವಿ ಪೀಡಿತ ಮಹಿಳೆ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ದಕ್ಕೆ ಗ್ರಾಮ ಪಂಚಾಯತ್ ಇಡೀ ಕೆರೆಯನ್ನೇ ಖಾಲಿ ಮಾಡಿಸಲು ಮುಂದಾಗಿದೆ.
ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿರುವ 18 ಸಾವಿರ ಜನರ ನೀರಿನ ದಾಹ ತೀರಿಸುವ ಕೆರೆಯ ನೀರನ್ನು ಗ್ರಾಮ ಪಂಚಾಯತ್ ಖಾಲಿ ಮಾಡಿಸುತ್ತಿದೆ. ಕಳೆದ ವಾರ ಈ ಕೆರೆಯಲ್ಲಿ ಗ್ರಾಮದ ಎಚ್‍ಐವಿ ಪೀಡಿತ ಮಹಿಳೆ ಬಿದ್ದು ಸಾವನ್ನಪ್ಪಿದ್ದಳು. ಈ ಸುದ್ದಿ ಕೇಳಿ ಇಡೀ ಗ್ರಾಮದ ಜನರಿಗೆ ಶಾಕ್ ಆಗಿದ್ದು, ಆ ರೋಗ ನಮಗೂ ಬರಬಹುದು ಎಂದು ಗ್ರಾಮದ ಜನರು ಕೆರೆಯ ಪಕ್ಕಕ್ಕೆ ಕೂಡಾ ಹಾದು ಹೋಗುತ್ತಿಲ್ಲ.
Advertisement
Advertisement
ಕೆರೆಯು ಸುಮಾರು 36 ಏಕರೆ ಜಾಗದಲ್ಲಿ ಹರಡಿಕೊಂಡಿದ್ದು, ಇದರಲ್ಲಿ 2 ವರ್ಷಕ್ಕೆ ಆಗುವಷ್ಟು ನೀರಿದೆ. ಆದರೆ ಗ್ರಾಮದ ಜನರು ಆತಂಕ ಪಟ್ಟಿದ್ದಕ್ಕೆ ಪಂಚಾಯತ್ ಕೂಡಾ ಅನಿವಾರ್ಯವಾಗಿ ಈ ಕೆರೆಯ ನೀರನ್ನು ಚರಂಡಿಗೆ ಬಿಡುವ ಸ್ಥಿತಿ ಬಂದಿದೆ. ಅದಕ್ಕಾಗಿ 20 ಪೈಪಗಳನ್ನು ಅಳವಡಿಸಿ ಕಳೆದ ಮೂರು ದಿನಗಳಿಂದ ನೀರನ್ನು ತೆಗೆಯುವ ಕೆಲಸ ನಡೆಯುತ್ತಿದೆ. ಕೆರೆಯ ನೀರು ಅಷ್ಟು ಸುಲಭವಾಗಿ ಖಾಲಿಯಾಗಲ್ಲ ಎಂದು ಕೆರೆಯ ವಾಲನ್ನ ಕೂಡಾ ಬಿಚ್ಚಿ ನೀರು ಖಾಲಿ ಮಾಡಲಾಗುತ್ತಿದೆ.
Advertisement
Advertisement
ನೀರು ಖಾಲಿಮಾಡಿಸಿದ ನಂತರ ಮತ್ತೆ ಕೆರೆ ಭರ್ತಿಯಾಗಲು ಕನಿಷ್ಠ 15 ದಿನಗಳಾದರೂ ಬೇಕಾಗುತ್ತದೆ. ಸದ್ಯ ಗ್ರಾಮದ ಜನರು ಮಲಪ್ರಭಾ ಬಲದಂಡೆ ಕಾಲುವೆಗೆ ಬಿಟ್ಟಿರುವ ನೀರನ್ನು ತಂದು ಕುಡಿಯುತಿದ್ದಾರೆ. ಆದರೆ ಈ ನೀರು ಸರ್ಕಾರ ಬಂದ್ ಮಾಡಿದ್ದೇ ಆದರೆ ಇಲ್ಲಿ ಹನಿ ನೀರಿಗೂ ತೊಂದರೆಯಾಗಲಿದೆ.
ಪಂಚಾಯತ್ ಗ್ರಾಮದ ಜನರು ಹೇಳಿದ ತಕ್ಷಣ ಕೆರೆಯನ್ನ ಖಾಲಿ ಮಾಡಿಸಲು ಹೋಗಲಿಲ್ಲ. ಮೊದಲು ನೀರಿನ ಪರೀಕ್ಷೆ ಕೂಡ ಮಾಡಿಸಿತ್ತು. ಆದರೂ ಜನರ ಭಯ ಕಡಿಮೆಯಾಗಲಿಲ್ಲ. ಹೀಗಾಗಿ ಜನರ ಒತ್ತಾಯದಂತೆ ಕೆರೆ ನೀರನ್ನು ಖಾಲಿ ಮಾಡಲಾಗುತ್ತಿದೆ. ಕಾಲುವೆಗೆ ಬಿಟ್ಟಿರುವ ನೀರು ಇನ್ನು 15 ದಿನ ಬಿಟ್ಟರೆ ನಮ್ಮ ಕೆರೆಯನ್ನು ಮತ್ತೆ ನಾವು ತುಂಬಿಸಿಕೊಳ್ಳುತ್ತೇವೆ ಎಂದು ಗ್ರಾಮಸ್ಥ ಮುತ್ತಣ್ಣ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv