ಬಳ್ಳಾರಿ: ಶವ ಸಂಸ್ಕಾರಕ್ಕೂ ಸರಿಯಾದ ವ್ಯವಸ್ಥೆಯಿಲ್ಲದೆ ತುಂಬಿದ ಹಳ್ಳ ದಾಟಿ, ಶವ ಸಂಸ್ಕಾರ ಮಾಡಲು ಜನರು ತೆರಳಿದ ಹೃದಯ ವಿದ್ರಾವಕ ಘಟನೆ ಬಳ್ಳಾರಿ ತಾಲೂಕಿನ ಅಸುಂಡಿ ಗ್ರಾಮದಲ್ಲಿ ನಡೆದಿದೆ.
ಅಸುಂಡಿ ಗ್ರಾಮದ ನಿವಾಸಿ ಪರಶುರಾಮ್(45) ಸೋಮವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅಸುಂಡಿ ಗ್ರಾಮದಲ್ಲಿದ್ದ ಹಳ್ಳ ತುಂಬಿ ಹರಿಯುತ್ತಿದ್ದ ಪರಿಣಾಮ ಸ್ಮಶಾನಕ್ಕೆ ಶವಗಳನ್ನ ತೆಗೆದುಕೊಂಡು ಹೋಗಲು ಆಗದೆ, ನಿನ್ನೆಯಿಂದ ಶವವನ್ನು ಇಡಲಾಗಿತ್ತು. ಕೊನೆಗೆ ಬೇರೆ ಮಾರ್ಗವಿಲ್ಲದೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸೇರಿಕೊಂಡು ಇಂದು ಶವವನ್ನು ಶವದ ಪೆಟ್ಟಿಗೆಯಲ್ಲಿ ಹೊತ್ತುಕೊಂಡು ಹಳ್ಳ ದಾಟಿ ಶವ ಸಂಸ್ಕಾರ ಮಾಡಿದ್ದಾರೆ.
ಈ ಹಳ್ಳದಲ್ಲಿ ನೀರು ತುಂಬಿ ಹರಿಯುತ್ತಿದ್ದು, ಇದನ್ನು ದಾಟುವಾಗ ಸ್ವಲ್ಪ ಯಾಮಾರಿದರೂ ಅಂತ್ಯಸಂಸ್ಕಾರಕ್ಕೆ ಹೋದವರು ಕೊಚ್ಚಿ ಹೋಗುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಗ್ರಾಮದಲ್ಲಿ ಮೇಲ್ವರ್ಗಕ್ಕೊಂದು, ಕೆಳ ವರ್ಗದವರಿಗೊಂದು ಸ್ಮಶಾನವಿದೆ. ಆದರೆ ಕೆಳ ವರ್ಗದ ಸ್ಮಶಾನ ಹಳ್ಳದಾಚೆ ಇರುವುದರಿಂದ ಗ್ರಾಮಸ್ಥರು ಶವ ಸಂಸ್ಕಾರ ಮಾಡಲು ಪರದಾಡುತ್ತಿದ್ದಾರೆ.
ಈ ಬಗ್ಗೆ ಪಿಡಿಒ, ತಹಶಿಲ್ದಾರ್, ಡಿಸಿವರೆಗೂ ಗ್ರಾಮಸ್ಥರು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿಂದೆ ಶಾಸಕ ನಾಗೇಂದ್ರ ಕೂಡಾ ಚುನಾವಣೆ ವೇಳೆ ಸ್ಮಶಾನಕ್ಕೆ ಜಾಗ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಇದಾದ ನಂತರ ನಮ್ಮ ಗ್ರಾಮದ ಕಡೆ ತಲೆ ಹಾಕಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.