ಧಾರವಾಡ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟೋದಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಷ್ಟೇ ಹೇಳಿದರೂ ಕೆಲವು ಜನ ಕೇಳ್ತಾನೆ ಇಲ್ಲ. ಪೊಲೀಸರು ಲಾಠಿ ರುಚಿ ತೋರಿಸಿದರೂ ಕೆಲವರಿಗೆ ಭಯವೇ ಇಲ್ಲವಾಗಿ ಹೋಗಿದೆ. ಹೀಗಾಗಿ ಜನರನ್ನು ಹೇಗಾದರೂ ಮಾಡಿ ಗುಂಪಿನಿಂದ ಬೇರ್ಪಡಿಸಬೇಕು ಎಂದು ಧಾರವಾಡ ಜಿಲ್ಲೆಯ ಮಾರಡಗಿ ಗ್ರಾಮಸ್ಥರು ಹೊಸ ಪ್ಲಾನ್ ಮಾಡಿದ್ದಾರೆ.
ಗ್ರಾಮದ ಅರಳಿಮರದ ಕಟ್ಟೆ ಹಿಡಿದು ಗುಂಪು ಗುಂಪಾಗಿ ಕುಳಿತುಕೊಳ್ಳೋರೆಲ್ಲಾ ಈಗ ಅದರಿಂದ ದೂರ ಇರುವಂತೆ ಮಾರಡಗಿ ಗ್ರಾಮಸ್ಥರು ಮಾಡಿದ್ದಾರೆ. ಗ್ರಾಮದ ಪ್ರಮುಖ ವೃತ್ತದಲ್ಲಿರೋ ಅರಳಿಮರದ ಕಟ್ಟೆಗೆ ಡಾಂಬರು ಹಾಕಿದ್ದು, ಯಾರು ಕಟ್ಟೆಯ ಮೇಲೆ ಕೂರದಂತೆ ಮಾಡಿದ್ದಾರೆ. ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಯಾರೂ ಈ ಕಟ್ಟೆಯ ಮೇಲೆ ಕುಳಿತುಕೊಳ್ಳಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತ ಜನರಿಗೆ ಎಷ್ಟೇ ಹೇಳಿದರೂ ಯಾರೂ ಮಾತನ್ನು ಕೇಳಿರಲಿಲ್ಲ. ಗ್ರಾಮಸ್ಥರು ಒಂದು ಗುಂಪಿಗೆ ತಿಳಿ ಹೇಳಿ ಅಲ್ಲಿಂದ ಕಳಿಸುತ್ತಿದ್ದಂತೆ ಮತ್ತೊಂದು ಗುಂಪು ಕಟ್ಟೆ ಮೇಲೆ ಬಂದು ಕುಳಿತುಕೊಳ್ಳುತ್ತಿತ್ತು.
Advertisement
Advertisement
ಎಷ್ಟೇ ಹೇಳಿದರೂ ಕೇಳದ ಜನರಿಗೆ ಬುದ್ಧಿ ಕಲಿಸಲು ಗ್ರಾಮಸ್ಥರು ಪ್ಲಾನ್ ಮಾಡಿದ್ದು, ಆ ಕಟ್ಟೆಯ ಮೇಲೆ ಡಾಂಬರು ಸುರಿದು ಬಿಟ್ಟಿದ್ದಾರೆ. ಮೊದಲೇ ಈಗ ಬೇಸಿಗೆ, ಸೂರ್ಯ ಶಾಖಕ್ಕೆ ಡಾಂಬರು ಕಾಯುತ್ತಿರೋದು ಒಂದೆಡೆಯಾದ್ರೆ, ಅದು ಅಂಟಿಕೊಂಡ್ರೆ ಮುಗದೇ ಹೋಯ್ತು ಎಂದು ಜನರು ಕಟ್ಟೆಯಿಂದ ದೂರವಿದ್ದಾರೆ. ಹೀಗಾಗಿ ಈಗ ಯಾರೂ ಕೂಡ ಗುಂಪಾಗಿ ಕುಳಿತುಕೊಳ್ಳಲು ಸಾಧ್ಯವಾಗದೆ ತಮ್ಮ ಪಾಡಿಗೆ ತಾವೇ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ.