Saturday, 21st July 2018

Recent News

ಮರದ ಟೊಂಗೆಯಲ್ಲಿ ಅಡಗಿದ್ದ 20 ಅಡಿ ಹೆಬ್ಬಾವು ಹಿಡಿದು ಫ್ರೈ ಮಾಡಿ ತಿಂದ ಜನರು

ಕೌಲಾಲಂಪುರ: ಬಿದ್ದಿರುವ ಮರದ ಟೊಂಗೆಯಲ್ಲಿ ಅಡಗಿ ಕುಳಿತಿದ್ದ ಹೆಬ್ಬಾವನ್ನು ಹಿಡಿದು ಗ್ರಾಮಸ್ಥರು ಫ್ರೈ ಮಾಡಿ ತಿಂದಿರುವ ಘಟನೆ ಮಲೇಷ್ಯಾದ ಬೋರ್ನಿಯೋ ದ್ವೀಪದಲ್ಲಿ ನಡೆದಿದೆ.

ಶನಿವಾರ ದ್ವೀಪದ ಜನರು ಬೇಟೆಗಾಗಿ ಕಾಡಿನಲ್ಲಿ ಸಂಚರಿಸುತ್ತಿರುವಾಗ ಕಾಡಿನಲ್ಲಿ ಬಿದ್ದಿರುವ ಮರದ ಟೊಂಗೆಯಿಂದ ಶಬ್ಧ ಕೇಳಿಸಿದೆ. ಟೊಂಗೆಯಲ್ಲಿ ಚಿಕ್ಕಪುಟ್ಟ ಹಾವುಗಳು ಇರಬಹುದು ಎಂದು ನೋಡಿದಾಗ 20 ಅಡಿ ಉದ್ದದ ಗಂಡು ಹೆಬ್ಬಾವು ಪತ್ತೆಯಾಗಿದೆ.

ಸ್ಥಳೀಯರೆಲ್ಲ ಮರದ ಟೊಂಗೆಯನ್ನು ಮಧ್ಯಭಾಗದಲ್ಲಿಯೇ ಕಟ್ ಮಾಡಿ ಹೆಬ್ಬಾವನ್ನು ಹೊರ ಎಳೆದಿದ್ದಾರೆ. ಟೊಂಗೆಯಿಂದ ಹೊರಬಂದ ಹೆಬ್ಬಾವಿಗೆ ಶೂಟ್ ಮಾಡಿ ಕೊಂದು ಎಲ್ಲರೂ ಹೆಗಲ ಮೇಲೆ ಹೊತ್ತು ತೆರಳಿದ್ದಾರೆ.

ಹಬ್ಬದೂಟ ಸಿಕ್ಕಿದ್ದಕ್ಕೆ ಖುಷಿ: ಬಿಂತಲು ಪಟ್ಟಣದ ಕೆಲವಿಟ್ ನದಿ ಬಳಿಯ ಬಿದ್ದಿದ್ದ ಮರದ ಟೊಂಗೆಯಿಂದ ಶಬ್ದ ಕೇಳಿಸಿತು. ಟೊಂಗೆಯಲ್ಲಿ ಇಣುಕಿ ನೋಡಿದಾಗ ಗಂಡು ಹೆಬ್ಬಾವು ಸಣ್ಣ ಹೆಣ್ಣು ಹಾವುಗಳೊಂದಿಗೆ ಸಂಯೋಗದಲ್ಲಿತ್ತು. ಟೊಂಗೆಯನ್ನು ಮಧ್ಯಭಾಗದಲ್ಲಿ ಕತ್ತರಿಸಿ ಹೆಬ್ಬಾವು ಹೊರಗೆಳೆದು ಕೊಲ್ಲಲಾಯಿತು. ಇಂದು ಮತ್ತು ನಾಳೆ ನಮ್ಮ ಗ್ರಾಮದವರಿಗೆಲ್ಲಾ ಹಬ್ಬದೂಟ ಸಿಕ್ಕಿದೆ ಅಂತಾ ಸ್ಥಳೀಯ 60 ವರ್ಷದ ತಿನ್‍ಸಂಗ್ ಉಜಂಗ್ ಹೇಳಿದರು.

20 ಅಡಿ ಉದ್ದದ ಹೆಬ್ಬಾವು ನೋಡಿದಾಗ ನನಗೆ ಆಶ್ಚರ್ಯವಾಯಿತು. ನಾನು ಇದೂವರೆಗೂ 5 ಅಡಿ ಉದ್ದದ ಹೆಬ್ಬಾವುಗಳನ್ನು ನೋಡಿದ್ದೆ. ಸಾಮಾನ್ಯವಾಗಿ ಗಂಡು ಹೆಬ್ಬಾವುಗಳು ಚಿಕ್ಕದಾಗಿರುತ್ತವೆ. 20 ಅಡಿ ಉದ್ದದ ಹೆಬ್ಬಾವು ಹೊರ ಎಳೆದಾಗ ಜೊತೆಯಲ್ಲಿ ಇನ್ನೊಂದು ಹೆಬ್ಬಾವು ಕೂಡ ಬಂದಾಗ ಕೂಡಲೇ ಶೂಟ್ ಮಾಡಿ ಕೊಲ್ಲಲಾಯಿತು. ಹೆಬ್ಬಾವು ಆಹಾರ ನನ್ನ ಹಾಗು ನಮ್ಮ ಸಮುದಾಯದವರ ಫೇವರೇಟ್ ಡಿಶ್ ಆಗಿದೆ.

ಗ್ರಾಮದ ತುಂಬೆಲ್ಲಾ ಮೆರವಣಿಗೆ: ಹೆಬ್ಬಾವುಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದು ನಮ್ಮ ಜೀಪಿನಲ್ಲಿ ಹಾಕಿ ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಲಾಯಿತು. ಗ್ರಾಮದ ಯುವಕರೆಲ್ಲಾ ಜೋರಾಗಿ ಕೂಗುವ ಮೂಲಕ ತಮ್ಮ ಸಂತೋಷವನ್ನು ಹೊರ ಹಾಕಿದ್ರು ಅಂತಾ ತಿನ್‍ಸಂಗ್ ಉಜಂಗ್ ತಿಳಿಸಿದ್ದಾರೆ.

ಅರಣ್ಯದಿಂದ ಹೆಬ್ಬಾವನ್ನು ಗ್ರಾಮಕ್ಕೆ ತಂದ ಬಳಿಕ ತರಕಾರಿಗಳೊಂದಿಗೆ ಬೇಯಿಸಿ ಅಡುಗೆ ಸಿದ್ಧ ಮಾಡಲಾಯಿತು. ಇನ್ನು ಅರ್ಧ ಮಾಂಸವನ್ನು ಫ್ರೈ ಮಾಡಿ ಅನ್ನದೊಂದಿಗೆ ಮಿಕ್ಸ್ ಮಾಡಿ ಗ್ರಾಮಸ್ಥರು ಸವಿದಿದ್ದಾರೆ. ಹೆಬ್ಬಾವಿನಿಂದ ಸಿದ್ಧಪಡಿಸಿದ ಆಹಾರವನ್ನು ಸಮನಾಗಿ ವಿಂಗಡಿಸಿ ಹಂಚಲಾಯಿತು. ಸ್ಥಳೀಯ ಅರಣ್ಯ ಪ್ರದೇಶದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ವಿತರಿಸಲಾಯಿತು.

Leave a Reply

Your email address will not be published. Required fields are marked *