ಬೆಳಗಾವಿ: ಚಿಕ್ಕೋಡಿ ಭಾಗದ ರೈತರು ಇಂದು ಎಳ್ಳ ಅಮವಾಸ್ಯೆ ಆಚರಿಸಿ ಭೂಮಿ ತಾಯಿಗೆ ಪೂಜೆ ಸಲ್ಲಿಸಿದ್ದಾರೆ. ಅತಿವೃಷ್ಟಿಯ ಬಾಧೆಯ ನಡುವೆಯೂ ಆರ್ಥಿಕ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿದ್ದರೂ, ರೈತರ ಸಂಪ್ರದಾಯಕ್ಕೆ ಯಾವಾಗಲೂ ಬರವಿಲ್ಲ ಎಂಬಂತೆ ಸಡಗರವಿಲ್ಲದಿದ್ದರೂ ಸರಳವಾಗಿ ಹಬ್ಬವನ್ನ ಆಚರಿಸಿದ್ದಾರೆ.
ಭೂಮಿ ತಾಯಿಗೆ ಅನ್ನ ಪ್ರಸಾದ ಹಾಗೂ ನೀರನ್ನು ಅರ್ಪಿಸುವ ಮೂಲಕ ಸಂತೃಪ್ತಗೊಳಿಸುವ ಸಂಭ್ರಮದ ಎಳ್ಳ ಅಮವಾಸ್ಯೆಯನ್ನು ಆಚರಿಸಲಾಯಿತು. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಅನ್ನದಾತರಾದ ರೈತರ ಜೀವನ ಸುಖಮವಾಗಬೇಕೆಂದು ಮಹಿಳೆಯರು, ಮಕ್ಕಳು ಭೂಮಾತೆಗೆ ಪೂಜೆ ಸಲ್ಲಿಸಿದರು.
Advertisement
Advertisement
ಮಾರ್ಗಶಿರ ಮಾಸದಲ್ಲಿ ಬರುವ ಎಳ್ಳ ಅಮವಾಸ್ಯೆಯ ದಿನದಂದು ಉತ್ತರ ಕರ್ನಾಟಕದ ರೈತರು ತಮ್ಮ ತಮ್ಮ ಹೊಲಗಳಿಗೆ ಕುಟುಂಬ ಸಮೇತ ಹೋಗಿ, ತಮ್ಮ ಹೊಲದಲ್ಲಿ ಹಸಿರಿನಿಂದ ಕಂಗೊಳಿಸುವ ಭೂ ತಾಯಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸುವ ವಾಡಿಕೆ. ಹಾಗೆಯೇ ಜೋಳದ ಕಡಬು, ರೊಟ್ಟಿಯ ಮಿಶ್ರಣದಿಂದ ಮಾಡಿದ ಚರಗವನ್ನು ಹೊಲದ ತುಂಬಾ ಚೆಲ್ಲುವ ಮೂಲಕ ಈ ಸುಗ್ಗಿ ಸಮೃದ್ಧಿಯಾಗುವಂತೆ ಮಾಡು ತಾಯಿ ಎಂದು ಭೂ ತಾಯಿಗೆ ಬೇಡಿಕೊಂಡರು.
Advertisement
ರೈತ ಮಹಿಳೆಯರು ಜಮೀನಿಗೆ ತೆರಳುವ ಮುನ್ನ ಮನೆಯಲ್ಲಿ ವಿವಿಧ ರೀತಿಯ ಭೋಜನವನ್ನು ತಯಾರಿಸುತ್ತಾರೆ. ಅದರಲ್ಲೂ ಶೇಂಗಾ ಹೋಳಿಗೆ, ರೊಟ್ಟಿ, ಶೇಂಗಾ ಚಟ್ನಿ, ಪುಂಡಿಫಲ್ಲಿ, ಬಜ್ಜಿ, ಕಡಬು ಸೇರಿದಂತೆ ಹತ್ತಾರು ರೀತಿಯ ಅಡುಗೆಯನ್ನು ಮಾಡಿಕೊಳ್ಳುತ್ತಾರೆ. ತಮ್ಮ ತಮ್ಮ ಹೊಲಗಳಲ್ಲಿ ಹಸಿರನ್ನುಟ್ಟು ಕಂಗೊಳಿಸುತ್ತಿರುವ ಭೂ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ಕುಟುಂಬದ ಎಲ್ಲ ಜನರು ಸೇರಿ ಭರ್ಜರಿ ಭೋಜನವನ್ನು ಸವಿದು ಹಬ್ಬದ ಸಂಭ್ರಮ ಸವಿದರು.