ಬೆಳಗಾವಿ(ಚಿಕ್ಕೋಡಿ): ಆಹಾರ ಅರಸಿ ನದಿ ತೀರದ ತೋಟದ ವಸತಿಗೆ ನುಗ್ಗಿದ ಸುಮಾರು 7 ಅಡಿ ಉದ್ದದ ಮೊಸಳೆಯೊಂದನ್ನು ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ದರ್ಗಾ ಬಳಿ ಗ್ರಾಮಸ್ಥರು ಸೆರೆಹಿಡಿದು ಮರಕ್ಕೆ ಕಟ್ಟಿ ಹಾಕಿದ್ದಾರೆ.
ಆಹಾರ ಅರಸಿ ಕೆಲ ದಿನಗಳ ಹಿಂದೆಯೇ ಮೊಸಳೆ ಹೊರ ಬಂದಿರುವ ಶಂಕೆ ಗ್ರಾಮಸ್ಥರಿಗೆ ಇತ್ತು. ಆದರೆ ಯಾರ ಕಣ್ಣಿಗೂ ಮೊಸಳೆ ಕಾಣಿಸಿಕೊಂಡಿರಲಿಲ್ಲ. ಮಂಗಳವಾರ ಕಬ್ಬಿನ ಗದ್ದೆಯಲ್ಲಿ ಸ್ಥಳೀಯರಿಗೆ ಮೊಸಳೆ ಗೋಚರಿಸಿದೆ. ಈ ವೇಳೆ ಮೊಸಳೆಯನ್ನು ಸೆರೆ ಹಿಡಿಯಲು ನಿರ್ಧರಿಸಿದರು. ನಂತರ ಹರಸಾಹಸ ಪಟ್ಟು ಮೊಸಳೆಯನ್ನು ಸೆರೆಹಿಡಿಯುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ.
ಅರಣ್ಯ ಇಲಾಖೆಯ ಸಹಾಯವಿಲ್ಲದೆ ಗ್ರಾಮಸ್ಥರೇ ಮೊಸಳೆಯನ್ನು ಸೆರೆ ಹಿಡಿದಿದ್ದಾರೆ. ಅಲ್ಲದೆ ಮೊಸಳೆ ಬೇರೆಲ್ಲೂ ಹೋಗದಂತೆ ಅದಕ್ಕೆ ಹಗ್ಗ ಹಾಕಿ ಮರಕ್ಕೆ ಕಟ್ಟಿಹಾಕಿದ್ದಾರೆ. ಈ ಮೊಸಳೆಯನ್ನು ನೋಡಿದ ಮಕ್ಕಳು ಹಾಗೂ ಜನರು ಅದರ ಫೋಟೋ ಕ್ಲಿಕ್ಕಿಸಿದ್ದಾರೆ.