ಕಾರವಾರದಲ್ಲಿ ಸೇತುವೆ ಸಂಪರ್ಕ ಬಂದ್- ಕಿ.ಮೀ ಗಟ್ಟಲೇ ವ್ಯಕ್ತಿ ಹೊತ್ತೊಯ್ದ ಜನ

Public TV
2 Min Read
KARWAR VILLAGE 1

ಕಾರವಾರ: ದೇಶ ಎಷ್ಟೇ ಮುಂದುವರಿದಿದ್ದರೂ ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಮಾತ್ರ ಅಭಿವೃದ್ಧಿ ಎನ್ನುವುದೇ ಮರೀಚಿಕೆ. ರಸ್ತೆಗಳಿಲ್ಲದೇ ಅದೆಷ್ಟೋ ಗ್ರಾಮಗಳು ಇಂದು ಸಹ ಅನಾರೋಗ್ಯ ಪೀಡಿತ ಜನರನ್ನು ಕರೆತರಲು ಜೋಳಿಗೆಯೇ ಆಶ್ರಯ. ಮಳೆಬಂತು ಎಂದರೇ ಜಲದಿಗ್ಭಂದನವಾಗುವ ಗ್ರಾಮದ ಜನರ ಸಂಕಷ್ಟ ಕೇಳುವರೇ ಇಲ್ಲ.

KARWAR VILLAGE

ಉತ್ತರ ಕನ್ನಡ (UttaraKannada) ಜಿಲ್ಲೆಯ ಅಂಕೋಲಾ (Ankola) ತಾಲೂಕಿನ ಕೆಂದಗಿ ಗ್ರಾಮದ ಉಮೇಶ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕತ್ತಿ ಜಾರಿದ ಪರಿಣಾಮ ಕಾಲಿಗೆ ಗಂಭೀರ ಗಾಯಗೊಂಡಿದ್ದ. ಆದರೆ ಭಾರೀ ಮಳೆಯಿಂದಾಗಿ ಗ್ರಾಮದ ಬಳಿ ಹರಿಯುವ ನಾಲ್ಕು ಹಳ್ಳಗಳಿಂದಾಗಿ ಜಲದಿಗ್ಭಂದನ ಉಂಟಾಗಿದ್ದು, ಆಸ್ಪತ್ರೆಗೆ (Hospital) ತೆರಳಲಾಗದೇ ಮನೆಯಲ್ಲಿಯೇ ಉಳಿದುಕೊಳ್ಳುವಂತಾಗಿತ್ತು. ನಾಲ್ಕೈದು ದಿನಗಳ ಬಳಿಕ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಈ ವೇಳೆ ಗ್ರಾಮಸ್ಥರು ಒಟ್ಟಾಗಿ ಜೋಳಿಗೆ ಮೂಲಕ ಗಾಯಗೊಂಡಿದ್ದ ಉಮೇಶ್‌ನನ್ನ ಹೆಗಲ ಮೇಲೆ ಹೊತ್ತುಕೊಂಡು ಸುಮಾರು 15 ಕಿಲೋ ಮೀಟರ್ ದೂರ ಕಾಡಿನ ಹಾದಿಯಲ್ಲಿ ನಡೆದುಕೊಂಡೇ ಕರೆತಂದಿದ್ದಾರೆ. ಬಳಿಕ ಹಟ್ಟಿಕೇರಿ ಗ್ರಾಮದಿಂದ ವಾಹನದ ಮೂಲಕ ಕಾರವಾರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದು ರಸ್ತೆಯಿಲ್ಲದ ಪರಿಣಾಮ ಗಾಯಗೊಂಡು ವಾರದ ಬಳಿಕ ಆಸ್ಪತ್ರೆಗೆ ಸೇರುವಂತಾಗಿದೆ.

ಕೆಂದಗಿ ಗ್ರಾಮವು ದಟ್ಟ ಕಾಡಿನ ನಡುವೆ ಇದ್ದು ಏನೇ ಅಗತ್ಯ ವಸ್ತುಗಳು ಬೇಕಿದ್ದರೂ ಸಹ 18 ಕಿಲೋ ಮೀಟರ್ ದೂರದ ಹಟ್ಟಿಕೇರಿ ಗ್ರಾಮಕ್ಕೆ ಆಗಮಿಸಬೇಕು. ಗ್ರಾಮಕ್ಕೆ ತೆರಳಬೇಕಂದ್ರೆ ರಸ್ತೆಯೇ ಇಲ್ಲ. ಬೊಕಳೆ ಹಳ್ಳ, ವತ್ತಿನ ಹಳ್ಳ, ಕಂಬದ ಹಳ್ಳ ಹಾಗೂ ಕೆಂದಗಿ ದೊಡ್ಡ ಹಳ್ಳವನ್ನ ಕಾಲು ಹಾದಿಯಲ್ಲಿ ನಡೆದುಕೊಂಡು ದಾಟಿಯೇ ಬರಬೇಕು. ಮಳೆಗಾಲದಲ್ಲಂತೂ ಗ್ರಾಮಸ್ಥರ ಪಾಡು ಹೇಳತೀರದಾಗಿದ್ದು ಹಳ್ಳಗಳು ತುಂಬಿ ಹರಿಯುವ ಸಂದರ್ಭದಲ್ಲಿ ಗ್ರಾಮದ ಸಂಪರ್ಕ ಸಂಪೂರ್ಣ ಕಡಿತಗೊಳ್ಳುತ್ತದೆ. ಹೀಗಾಗಿಯೇ ಗ್ರಾಮದಲ್ಲಿನ ವಿದ್ಯಾರ್ಥಿಗಳು ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ದೇಶ ಚಂದ್ರನ ಮೇಲೆ ತಲುಪಿದರೂ ಸಹ ಇದುವರೆಗೂ ರಸ್ತೆ ಸಂಪರ್ಕವಿಲ್ಲದೇ ಈವಗ್ರಾಮದ ಜನ ನಗರ ಪ್ರದೇಶಕ್ಕೆ ತಲುಪದ ಸ್ಥಿತಿ ಇದೆ. ಇನ್ನಾದ್ರೂ ಸರ್ಕಾರ ಇತ್ತ ಗಮನಹರಿಸಿ ಗ್ರಾಮಕ್ಕೆ ಕನಿಷ್ಠ ಸಂಪರ್ಕ ವ್ಯವಸ್ಥೆಯನ್ನಾದರೂ ಕಲ್ಪಿಸಿಕೊಡಬೇಕಿದೆ.

Web Stories

Share This Article