– ಈ ಗ್ರಾಮದಲ್ಲೀಗ ರಾತ್ರಿ ಅಂದ್ರೆನೇ ಭಯ
ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಕರಗನಗನಮರಡಿ ಗ್ರಾಮದಲ್ಲಿ ನವೆಂಬರ್ 24ರಂದು ಬಸ್ ನಾಲೆಗೆ ಉರುಳಿ 30 ಜನ ಜಲ ಸಮಾಧಿಯಾಗಿದ್ದರು. ಅಪಘಾತದ ನಂತರ ಬಸ್‍ನ್ನು ವಶಕ್ಕೆ ಪಡೆದಿರುವ ಪಾಂಡವಪುರ ಪೊಲೀಸರು ಅದನ್ನು ಪೊಲೀಸ್ ಠಾಣೆಯ ಹಿಂಭಾಗ ನಿಲ್ಲಿಸಿದ್ದಾರೆ. ಆದರೆ ಆ ಬಸ್ ನಿಲ್ಲಿಸಿದ ನಂತರ ರಾತ್ರಿ ವೇಳೆ ಜನ ಆ ಬಸ್ ಬಳಿ ಹೋಗಲು ಭಯ ಬೀಳುತ್ತಿದ್ದಾರೆ.
ಯಾಕಂದ್ರೆ ಈ ಬಸ್ ನಿಲ್ಲಿಸಿದಂದಿನಿಂದ ಇಲ್ಲಿಯ ಜನರಿಗೆ ವಿಚಿತ್ರ ಅನುಭವಗಳಾಗುತ್ತಿದೆಯಂತೆ. ರಾತ್ರಿ ಆಯ್ತು ಅಂದ್ರೆ ಸಾಕು ಈ ಬಸ್ ಬಳಿ ನಾಯಿಗಳು ವಿಚಿತ್ರವಾಗಿ ಜೋರಾಗಿ ಕೂಗಲಾರಂಭಿಸುತ್ತವೆ. ಅಷ್ಟೇ ಅಲ್ಲದೇ ಬಸ್ ಬಳಿ ವಿಚಿತ್ರ ಶಬ್ಧದ ಅನುಭವವಾಗುತ್ತದೆ. ಇದರಿಂದಾಗಿ ರಾತ್ರಿ ವೇಳೆ ಈ ಭಾಗದಲ್ಲಿ ಓಡಾಡುತ್ತಿದ್ದ ಬಹುತೇಕರು ತಮ್ಮ ಮಾರ್ಗ ಬದಲಿಸಿದ್ದಾರೆ. ಮೂವತ್ತು ಜನರನ್ನು ಬಲಿ ಪಡೆದ ಬಸ್ ಇದೀಗ ಪ್ರೇತಾತ್ಮಗಳ ತಾಣವಾಗಿದೆಯಾ ಎಂಬ ಚರ್ಚೆ ಕೂಡ ಇಲ್ಲಿಯ ಜನರಲ್ಲಿ ಶುರುವಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ.
ಬಸ್ ನಿಂತಿರುವ ಜಾಗದ ಕಥೆ ಇದಾದ್ರೆ, ಬಸ್ ನಾಲೆಗೆ ಉರುಳಿ ಬಿದ್ದ ಜಾಗದಲ್ಲಿ ಈಗ ಗ್ರಾಮಸ್ಥರು ಹೋಮ ಮಾಡಿಸಿ ಬಲಿ ಕೊಡಲು ಮುಂದಾಗಿದ್ದಾರೆ. ಈ ಹಿಂದೆ ಬಸ್ ಬಿದ್ದ ಜಾಗದಲ್ಲಿ ರಾತ್ರಿ ಸಮಯದಲ್ಲೂ ವಾಹನಗಳು ಆಗೊಂದು ಈಗೊಂದು ಓಡಾಡುತ್ತಿದ್ವಂತೆ. ರೈತರು ತಮ್ಮ ಗದ್ದೆಯಲ್ಲಿ ನೀರು ಬಿಡಲು ರಾತ್ರಿಯೆಲ್ಲಾ ಓಡಾಡುತ್ತಿದ್ದರು.
ಅಷ್ಟೇ ಅಲ್ಲದೇ ಗದ್ದೆಯಲ್ಲಿ ಪಂಪ್‍ಹೌಸ್ ಇದ್ದವರು ಅಲ್ಲೇ ರಾತ್ರಿಯೆಲ್ಲ ಮಲಗುತ್ತಿದ್ದರಂತೆ. ಆದ್ರೆ ಅಪಘಾತವಾದ ನಂತರ ಕತ್ತಲಾಗುತ್ತಿದ್ದಂತೆ ಬಸ್ ಬಿದ್ದ ಜಾಗದಲ್ಲಿ ಓಡಾಡಲು ಭಯ ಶುರುವಾಗಿದೆಯಂತೆ. ಹೀಗಾಗಿ ಆರು ಗಂಟೆಯ ನಂತರ ರೈತರೆಲ್ಲ ಮನೆ ಸೇರುತ್ತಿದ್ದಾರೆ. ಈ ರಸ್ತೆಯಲ್ಲಿ ವಾಹನಗಳ ಓಡಾಟವೂ ಕಡಿಮೆಯಾಗಿದೆ. ಆದ್ದರಿಂದ ಗ್ರಾಮಸ್ಥರೆಲ್ಲ ಸೇರಿ ತಮ್ಮ ಭಯ ನಿವಾರಿಸಿಕೊಳ್ಳಲು ಈ ಜಾಗದಲ್ಲಿ ಹೋಮ ಮಾಡಿ, ಬಲಿ ಕೊಡಲು ಮುಂದಾಗಿದ್ದಾರೆ ಅನ್ನೋ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv