ಮಂಡ್ಯ: ಕಾಮಗಾರಿ ಆರಂಭಿಸಿ ಅರ್ಧಕ್ಕೆ ನಿಲ್ಲಿಸಿ ಗ್ರಾಮದಲ್ಲಿ ಸಂಗ್ರಹಿಸಿದ್ದ ಟಾರ್ ಮತ್ತು ಇನ್ನಿತರೆ ವಸ್ತುಗಳನ್ನು ರಾತ್ರೋರಾತ್ರಿ ಬೇರೆಡೆಗೆ ಸಾಗಿಸಲು ಮುಂದಾಗಿದ್ದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ನಾಗಮಂಗಲ ತಾಲೂಕಿನ ಕುರುಡಿಕೆರೆ ಗ್ರಾಮದಲ್ಲಿ ನಡೆದಿದೆ. ವಿಧಾನಸಭೆ ಚುನಾವಣೆಗೆ ಆರು ತಿಂಗಳ ಮುಂಚೆ ಕುರುಡಿಕೆರೆ ಗ್ರಾಮದ ರಸ್ತೆ ಅಭಿವೃದ್ಧಿಪಡಿಸಲು ಅಂದಿನ ಶಾಸಕ ಚಲುವರಾಯಸ್ವಾಮಿ ಗುದ್ದಲಿ ಪೂಜೆ ನೆರವೇರಿಸಿದ್ದರು. ಅಲ್ಲದೇ ಕೆಆರ್‍ಡಿಎಲ್‍ನಿಂದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಗುತ್ತಿಗೆದಾರ ರಸ್ತೆಗೆ ಜಲ್ಲಿಯನ್ನು ಕೂಡ ಹರಡಿಸಿದ್ದರು. ರಸ್ತೆ ನಿರ್ಮಾಣಕ್ಕೆ ಬೇಕಾದ ಟಾರ್ ಸೇರಿದಂತೆ ಇನ್ನಿತರೆ ವಸ್ತಗಳನ್ನು ಗ್ರಾಮದಲ್ಲಿ ಸಂಗ್ರಹಿಸಲಾಗಿತ್ತು.
Advertisement
ಚುನಾವಣೆ ಫಲಿತಾಂಶ ಪ್ರಕಟವಾದಾಗ ಗುದ್ದಲಿ ಪೂಜೆ ನೆರವೇರಿಸಿದ್ದ ಚಲುವರಾಯಸ್ವಾಮಿ ಸೋತು ಸುರೇಶ್‍ಗೌಡ ಶಾಸಕರಾಗಿ ಆಯ್ಕೆಯಾಗಿದ್ದರು. ಹೀಗಾಗಿ ಚುನಾವಣೆ ನಂತರ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಈ ನಡುವೆ ನಿನ್ನೆ ರಾತ್ರಿ ಕೆಆರ್‍ಡಿಎಲ್ ಎಂಜಿನಿಯರ್ ಸೋಮಶೇಖರ್ ಕುರುಡಿಕೆರೆಗೆ ಭೇಟಿ ನೀಡಿ ಗ್ರಾಮದಲ್ಲಿ ಸಂಗ್ರಹಿಸಿದ್ದ ಟಾರ್ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಟ್ರ್ಯಾಕ್ಟರ್‍ನಲ್ಲಿ ಬೇರೆಡೆಗೆ ಸಾಗಿಸಲು ಹೊರಟಿದ್ದರು. ಅದನ್ನು ಕಂಡು ಗ್ರಾಮಸ್ಥರು ಟ್ರ್ಯಾಕ್ಟರ್ ತಡೆದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
ರಾಜಕೀಯ ಬಿಟ್ಟು ಮೊದಲು ರಸ್ತೆ ಕಾಮಗಾರಿ ಪೂರೈಸಿ ಎಂದು ಆಗ್ರಹಿಸಿದ್ದಾರೆ. ಅಂತಿಮವಾಗಿ ಶಾಸಕ ಸುರೇಶ್‍ಗೌಡ ಅವರಿಗೆ ವಿಷಯ ತಿಳಿದು ಮೊದಲು ಅರ್ಧಕ್ಕೆ ನಿಂತಿರುವ ರಸ್ತೆ ಕಾಮಗಾರಿಯನ್ನು ಒಂದು ವಾರದೊಳಗೆ ಪೂರ್ಣಗೊಳಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv