ಸ್ಯಾಂಡಲ್‌ವುಡ್ ‘ವಿಕ್ರಾಂತ್ ರೋಣ’ (Vikrant Rona) ಬ್ಯೂಟಿ ನೀತಾ ಅಶೋಕ್ (Neetha Ashok) ಅವರು ಜುಲೈ 10ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸೋಷಿಯಲ್ ಮೀಡಿಯಾದಲ್ಲಿ ನೀತಾ ಮದುವೆ (Wedding) ಫೋಟೋಗಳು ಕೆಲವು ವೈರಲ್ ಆಗಿತ್ತು. ಆದರೆ ತಮ್ಮ ಮದುವೆಯ ಫೋಟೋಗಳನ್ನ ನಟಿ ಎಲ್ಲೂ ಹಂಚಿಕೊಂಡಿರಲಿಲ್ಲ. ಇದೀಗ ಪತಿ ಸತೀಶ್ ಜೊತೆಗಿನ ಮುದ್ದಾದ ಫೋಟೋವನ್ನ ನೀತಾ ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ನಮ್ಮ ಪ್ರೀತಿ ಈಗಷ್ಟೇ ಮತ್ತೊಂದು ಲೆವಲ್ ಪಡೆದುಕೊಂಡಿದೆ ಎಂದು ಅಡಿಬರಹ ನೀಡಿ, ನೀತಾಗೆ ಪತಿ ಸತೀಶ್ ಮುತ್ತಿಡುವ ಫೋಟೋವನ್ನ ಹಂಚಿಕೊಂಡಿದ್ದರು. ನೀತಾ ಮದುವೆ ಫೋಟೋ ಪೋಸ್ಟ್ ಮಾಡ್ತಿದ್ದಂತೆ ನಟಿಯರಾದ ದಿವ್ಯಾ ಉರುಡುಗ, ಅದ್ವಿತಿ ಶೆಟ್ಟಿ, ಕೃಷಿ ತಾಪಂಡ, ಸೋನಾಲ್ ಮತ್ತು ಅಭಿಮಾನಿಗಳು ಶುಭಕೋರಿದ್ದಾರೆ. ಇದನ್ನೂ ಓದಿ:ದುಲ್ಕರ್ ಸಲ್ಮಾನ್ ಚಿತ್ರಕ್ಕೆ ‘ಲಕ್ಕಿ ಬಾಸ್ಕರ್’ ಟೈಟಲ್ ಫಿಕ್ಸ್
‘ಯಶೋದ’ (Yashoda) ಸೀರಿಯಲ್ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಟಿ ನೀತಾ ಅಶೋಕ್ ಅವರು ನಾ ನಿನ್ನ ಬಿಡಲಾರೆ, ಸೇರಿದಂತೆ ಹಿಂದಿ ಸೀರಿಯಲ್‌ನಲ್ಲೂ ನಟಿಸಿದ್ದರು. ಬಳಿಕ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ನಿರೂಪ್ ಭಂಡಾರಿ ಜೋಡಿಯಾಗಿ ನೀತಾ ಮೋಡಿ ಮಾಡಿದ್ದರು. ನಟಿಯ ಮುದ್ದು ಮುಖ, ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಏಕಾಏಕಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನೀತಾ ಅಶೋಕ್ ಅವರು ಆಮೇಲೆ ಬಹುಕಾಲದ ಪ್ರೀತಿ ಬಗ್ಗೆ ಹೇಳಿಕೊಂಡಿದ್ದರು. ಕಾಲೇಜಿನಿಂದಲೇ ಇವರಿಬ್ಬರು ಸ್ನೇಹಿತರಾಗಿದ್ದು, ಆಮೇಲೆ ಪ್ರೀತಿ ಹುಟ್ಟಿ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಅಂದಹಾಗೆ ಸತೀಶ್ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. ನೀತಾ ಅವರು ಮೂಲತಃ ಉಡುಪಿಯವರು.
ನೀತಾ ಅಶೋಕ್ ಹಾಗೂ ಸತೀಶ್ ಮೆಸ್ತಾ ಅವರು ಕುಟುಂಬದ ಸಾಕ್ಷಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜುಲೈ 10ರಂದು ಮದುವೆ ಉಡುಪಿಯಲ್ಲಿ ನಡೆದಿದೆ. ನೀತಾ- ಸತೀಶ್ ಅವರು ಸರಳವಾಗಿ ಕುಟುಂಬಸ್ಥರು, ಆತ್ಮೀಯರ ಸಾಕ್ಷಿಯಾಗಿ 12.25ಕ್ಕೆ ಅಭಿಜಿತ್ ಲಗ್ನ ಮುಹೂರ್ತದಲ್ಲಿ ಮದುವೆ ಆಗಿದ್ದರು.