ಬೆಂಗಳೂರು: ವಿಕ್ರಂ ಇನ್ವೆಸ್ಟ್ ಮೆಂಟ್ ಕಂಪೆನಿಯ ಬಹುಕೋಟಿ ವಂಚನೆ ಕೇಸ್ ಈಗ ಸಿಐಡಿಗೆ ವರ್ಗಾವಣೆಯಾಗಿದೆ. ಸದ್ಯಕ್ಕೆ 300 ಕೋಟಿಯಷ್ಟು ವಂಚನೆ ಆಗಿದೆ ಅಂತ ಬನಶಂಕರಿ ಪೊಲೀಸರು ದಾಖಲೆ ನೀಡಿದ್ದರೂ. ಆದರೆ ಸಿಐಡಿ ಪೊಲೀಸರು ಸುಮಾರು 500 ಕೋಟಿ ರೂ. ಯಷ್ಟು ವಂಚನೆ ಆಗಿದೆ ಎಂದು ಶಂಕಿಸಿದ್ದಾರೆ.
ವಿಕ್ರಂ ಇನ್ವೆಸ್ಟ್ ಮೆಂಟ್ ಕಂಪೆನಿಯ ಸಂಸ್ಥಾಪಕ ರಾಘವೇಂದ್ರ ಸುಮಾರು 1,800 ಜನರಿಗೆ 500 ಕೋಟಿಯಷ್ಟು ವಂಚನೆ ಮಾಡಿದ್ದರು. ಈ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಪೊಲೀಸರಿಗೆ ಚುನಾವಣೆ ಹಿನ್ನೆಲೆಯಲ್ಲಿ ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ಸಾಧ್ಯವಾಗಿರಲಿಲ್ಲ. ಇದರಿಂದ ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾಯಿಸಿದೆ. ತನಿಖೆ ಆರಂಭಿಸಿರುವ ಸಿಐಡಿ ಅಧಿಕಾರಿಗಳು ಪ್ರಾಥಮಿಕ ತನಿಖೆಯಲ್ಲಿ 500 ಕೋಟಿಯಷ್ಟು ವಂಚನೆ ಆಗಿರುವ ಬಗ್ಗೆ ಸಾಕ್ಷ್ಯಾಧಾರವನ್ನು ಸಂಗ್ರಹಿಸಿದ್ದಾರೆ.
ಇನ್ನು ರಾಹುಲ್ ದ್ರಾವಿಡ್, ಪತ್ರಕರ್ತ ಸೂತ್ರಂ ಸುರೇಶ್‍ನ ಮೂಲಕ 30 ಕೋಟಿ ರೂ. ಹೂಡಿದ್ದಾರೆ. ಅಲ್ಲದೇ ಸಿನಿಮಾ, ಕ್ರೀಡಾಪಟು ಹಾಗೂ ವೈದ್ಯರೇ ಸುಮಾರು 200 ಕೋಟಿಗೂ ಅಧಿಕ ಹಣವನ್ನು ಹೂಡಿಕೆ ಮಾಡಿರುವುದು ಸಿಐಡಿ ತನಿಖೆಯಲ್ಲಿ ತಿಳಿದುಬಂದಿದೆ. ಈ ಬಗ್ಗೆ ವಿವಿಧ ಠಾಣೆಗಳಲ್ಲಿ ಇದುವರೆಗೂ 1,300ಕ್ಕೂ ಅಧಿಕ ಜನ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ಕೂಡ ಆರಂಭವಾಗಿದೆ.
ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರಾಘವೇಂದ್ರ ಮತ್ತು ಸೂತ್ರಂ ಸುರೇಶ್ ಸೇರಿದಂತೆ ಐವರನ್ನು ಸಿಐಡಿ ಪೊಲೀಸರು ವಾರೆಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ. ಈ ವಂಚನೆ ಪ್ರಕರಣದಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಕೂಡ ಇದ್ದಾರೆ ಎಂಬ ಅಂಶಗಳನ್ನು ಸಿಐಡಿ ಪೊಲೀಸರು ತಿಳಿಸಿದ್ದಾರೆ.