ಬೆಂಗಳೂರು: ವಿಕ್ರಂ ಗೌಡ ಎನ್‌ಕೌಂಟರ್ (Vikram Gowda) ವಿಚಾರದಲ್ಲಿ ಯಾವುದೇ ಅನುಮಾನ ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದು ಗೃಹ ಪರಮೇಶ್ವರ್ (Parameshwar) ಸ್ಪಷ್ಟಪಡಿಸಿದ್ದಾರೆ.
ಎನ್‌ಕೌಂಟರ್ (Encounter) ಬಗ್ಗೆ ಕೆಲ ಎಡಪಂಥೀಯರು ಅನುಮಾನ ವಿಚಾರ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೆ ಬಂದ ಮಾಹಿತಿ ಪ್ರಕಾರ ವಿಕ್ರಮ್ ಗೌಡ ಬಳಿ ಅಪಾಯಕಾರಿ ಶಸ್ತ್ರಾಸ್ತ್ರಗಳಿದ್ದವು. ವಿಕ್ರಮ್ ಮೇಲೆ ಕೊಲೆ ಆರೋಪ ಸೇರಿ 60 ಕ್ಕೂ ಹೆಚ್ಚು ಪ್ರಕರಣಗಳಿದ್ದವು. ಪೊಲೀಸರು ಶೂಟ್ ಮಾಡದಿದ್ದರೆ ವಿಕ್ರಮ್ ಗೌಡ ಪೊಲೀಸರನ್ನೇ ಶೂಟ್ ಮಾಡುವ ಸಾಧ್ಯತೆ ಇತ್ತು. ಹೀಗಾಗಿ ಎನ್‌ಕೌಂಟರ್ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ ಎಂದರು.
ಕಾಂಗ್ರೆಸ್ (Congress) ಬಂದ ಮೇಲೆ ನಕ್ಸಲ್ (Naxal) ಚಟುವಟಿಕೆ ಜಾಸ್ತಿಯಾಗಿದೆ ಎಂಬ ಶಾಸಕ ಸುನೀಲ್ ಕುಮಾರ್ ಆರೋಪಕ್ಕೆ, ನಕ್ಸಲ್ ನಿಗ್ರಹ ಪಡೆಯ ಕೇಂದ್ರ ಸ್ಥಳ ಕಾರ್ಕಳದಲ್ಲೇ ಇದೆ. ನಕ್ಸಲ್ ನಿಗ್ರಹ ದಳ ಸತತವಾಗಿ ನಕ್ಸಲರ ಚಟುವಟಿಕೆ ಮೇಲೆ ನಿಗಾ ಇಟ್ಟುಕೊಂಡೇ ಬಂದಿತ್ತು. ಆದರೆ ಕಳೆದ 15 ದಿನಗಳ ಹಿಂದೆ ನಕ್ಸಲ್ ಮುಖಂಡರಾದ ಲತಾ ಹಾಗೂ ರಾಜು ಕಾಣಿಸಿಕೊಂಡರು. ಆಗ ಕೂಂಬಿಂಗ್ ಮಾಡುವುದಕ್ಕೆ ಶುರು ಮಾಡಿದರು ಎಂದು ತಿಳಿಸಿದರು. ಇದನ್ನೂ ಓದಿ: ದಿನಸಿಗೆಂದು ಬಂದಿದ್ದ ವಿಕ್ರಂಗೌಡ ಉಡೀಸ್ – ಎನ್‌ಕೌಂಟರ್‌ಗೂ ಮುನ್ನ ಪೊಲೀಸರಿಂದ ಮನೆಯವರ ಶಿಫ್ಟ್
ಈ ಮಧ್ಯೆ ವಿಕ್ರಮ್ ಗೌಡ ತಂಡದಲ್ಲಿ ಇರುವ ಬಗ್ಗೆ ಮಾಹಿತಿ ಸಿಕ್ಕಿತು. ವಿಕ್ರಮ್ ಗೌಡನನ್ನು ಹಾಗೇ ಬಿಟ್ಟುಕೊಂಡು ಅವರು ಏನು ಮಾಡಿದರೂ ಸರಿ ಎನ್ನುವ ಪರಿಸ್ಥಿತಿ ಇರಲಿಲ್ಲ. ಅದಕ್ಕಾಗಿ ಎನ್‌ಕೌಂಟರ್ ಮಾಡಲಾಗಿದೆ. ಈ ಎನ್‌ಕೌಂಟರ್ ಮೇಲೆ ತನಿಖೆ ಆಗಬೇಕು ಅಂತ ಕೆಲವರು ಮಾಧ್ಯಮಗಳಲ್ಲಿ ಹೇಳಿದ್ದಾರೆ. ಮಷಿನ್ ಗನ್ ಇಟ್ಟುಕೊಂಡಿದ್ದ 60 ಪ್ರಕರಣ ಇರುವ ವಿಕ್ರಮ್ ಗೌಡ ಎನ್‌ಕೌಂಟರ್ ಬಗ್ಗೆ ಯಾವ ದೃಷ್ಟಿಯಿಂದ ತನಿಖೆ ಮಾಡಬೇಕು ಹೇಳಿ ಎಂದು ಪ್ರಶ್ನಿಸಿದರು.
ನಾವು ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲಿ ಮಾಡಿದ್ದೇವೆ. ಇಲ್ಲಿ ಕಾಂಗ್ರೆಸ್ ಬಿಜೆಪಿ ಎನ್ನುವ ಪ್ರಶ್ನೆ ಇಲ್ಲಿ ಬರಲ್ಲ, ಸುರಕ್ಷತೆ ಮುಖ್ಯ. ಈ ಹಿಂದೆಯೇ ಆತನಿಗೆ ಶರಣಾಗುವಂತೆ ಸೂಚಿಸಲಾಗಿತ್ತು. ಆದರೆ ಶರಣಾಗಿರಲಿಲ್ಲ ಎಂದು ಪರಮೇಶ್ವರ್ ಹೇಳಿದರು.